ಬಂಟ್ವಾಳ: ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿದ್ದರೂ ಸಹ ನಿತ್ಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿಲ್ಲ. ವಾರದ ಲಾಕ್ ಡೌನ್ ಮುಗಿದಿದ್ದು, ಇಂದು ಬೆಳಗ್ಗಿನಿಂದಲೇ ಅಂಗಡಿ-ಮುಂಗಟ್ಟುಗಳು ತೆರೆದು ಚಟುವಟಿಕೆಯಿಂದ ಕೂಡಿದ ವಾತಾವರಣ ಕಂಡು ಬಂದಿದೆ.
ವಾರದ ಕಾಲ ನಿಲುಗಡೆಯಾಗಿದ್ದ ಗ್ರಾಮೀಣ ಭಾಗಕ್ಕೆ ಸಂಚರಿಸುತ್ತಿದ್ದ ಬಸ್ಗಳು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಸಂಚಾರ ಆರಂಭಿಸಿದವು. ಪುತ್ತೂರು, ಧರ್ಮಸ್ಥಳ ರೂಟಿನಲ್ಲೂ ಈ ಹಿಂದಿನಂತೆ ನಿಗದಿತ ಬಸ್ಗಳು ರಸ್ತೆಗಿಳಿದಿವೆ. ಆಟೋ-ರಿಕ್ಷಾ, ಟೂರಿಸ್ಟ್ ಕಾರು, ವ್ಯಾನ್ ಸಹಿತ ವಿವಿಧ ಬಾಡಿಗೆ ವಾಹನಗಳು ಈ ಹಿಂದಿನಂತೆ ಸಂಚಾರ ಆರಂಭಿಸಿವೆ.
ಒಂದು ವಾರ ಕಾಲ ಮನೆಯಲ್ಲೇ ಕುಳಿತಿದ್ದ ಜನರು ಕೂಡ ತಮ್ಮ ಅಗತ್ಯದ ಕೆಲಸಕ್ಕಾಗಿ ಮತ್ತು ಸಾಮಗ್ರಿ ಖರೀದಿಗೆ ಪೇಟೆಯತ್ತ ಹೆಜ್ಜೆ ಹಾಕಿದ್ದಾರೆ. ಜನಸಂಚಾರವಿಲ್ಲದೆ ಒಂದು ವಾರ ಬಿಕೋ ಎನಿಸಿದ ಬಿ.ಸಿ. ರೋಡ್ ನ ಮಿನಿ ವಿಧಾನಸೌಧ ಚಟುವಟಿಕೆಯಿಂದ ಕೂಡಿತ್ತು. ಶಾಸಕರ ಕಚೇರಿ, ಪುರಸಭೆ, ತಾಪಂ ಕಚೇರಿ ಸಹಿತ ಎಲ್ಲಾ ಸರಕಾರಿ ಕಚೇರಿಗಳು ತೆರೆದಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.