ಮಂಗಳೂರು (ದಕ್ಷಿಣ ಕನ್ನಡ) : ಶಕ್ತಿ ಯೋಜನೆಯನ್ನು ಸರ್ಕಾರಿ ಬಸ್ಗಳಿಗೆ ಮಾತ್ರ ಸಿಮೀತಗೊಳಿಸಲಾಗಿದ್ದು, ಖಾಸಗಿ ಬಸ್ಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಅವರು ಮಾಧ್ಯಮದವರನ್ನು ಉದ್ದೇಶಿಸಿ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಖಾಸಗಿ ಬಸ್ಗಳದ್ದೇ ಪ್ರಾಬಲ್ಯವಿದ್ದು, ಬರೀ ಮಂಗಳೂರಿಗೆ ಖಾಸಗಿ ಬಸ್ಗೆ ಫ್ರೀ ಕೊಡುವುದಕ್ಕೆ ಆಗುವುದಿಲ್ಲ. ಈ ಯೋಜನೆಯನ್ನು ವಿಸ್ತರಣೆ ಮಾಡಿದ್ದಲ್ಲಿ ಇಡೀ ಕರ್ನಾಟಕಕ್ಕೆ ಮಾಡಬೇಕಾಗುತ್ತದೆ ಎಂದು ಹೇಳಿದ್ರು.
ಆರ್ಎಸ್ಎಸ್ಗೆ ಭೂಮಿ ನೀಡಿರುವ ಕುರಿತು ತನಿಖೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಭೂಮಿಯನ್ನು ಸರಿಯಾದ ಉದ್ದೇಶಕ್ಕೆ ನೀಡಬೇಕು. ಅರ್ಹತೆ ಇರುವ ಸಂಘ-ಸಂಸ್ಥೆಗಳು ತೆಗೆದುಕೊಳ್ಳಬೇಕು. ನಾನು ಹೇಳಿರುವ ಹೇಳಿಕೆ ಎಲ್ಲರಿಗೂ ಅನ್ವಯ. ಕೇವಲ ಒಬ್ಬರಿಗೆಂದು ಹೇಳಿರೋದಲ್ಲ. ಸರ್ಕಾರಿ ಭೂಮಿ ಸರಿಯಾಗಿ ಬಳಕೆಯಾಗಬೇಕೆಂಬ ದೃಷ್ಟಿಯಿಂದ ಹೇಳಿದ್ದೇನೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: Free Bus: ಉಚಿತ ಬಸ್ ಪ್ರಯಾಣ- ಮಹಿಳಾ ಪ್ರಯಾಣಿಕರು ಏನಂತಾರೆ?
ದ.ಕ ಜಿಲ್ಲೆಯ ಉಸ್ತುವಾರಿ ವಹಿಸಿರೋದು ನನಗೆ ಹೆಮ್ಮೆಯ ವಿಚಾರವಾಗಿದೆ. ಇಲ್ಲಿ ಸ್ಥಳೀಯ ಶಾಸಕರೇ ಉಸ್ತುವಾರಿ ಆದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಖಾದರ್ ಅವರು ಸಭಾಪತಿ ಆಗಿರೋದರಿಂದ ನನಗೆ ಜವಾಬ್ದಾರಿ ದೊರಕಿದೆ. ಆದರೆ ಸಚಿವನಾಗಿ ನಾನು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಕಾರ್ಯವನ್ನು ಮಾಡುತ್ತೇನೆ. ಅದಕ್ಕಾಗಿ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಬೇಕು. ಪಕ್ಷಾತೀತವಾಗಿ ಕೆಲಸ ಮಾಡೋದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಜವಾಬ್ದಾರಿ. ಎಲ್ಲರ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು.
ಶಕ್ತಿ ಯೋಜನೆಗೆ ಚಾಲನೆ: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಯೋಜನೆ ಶಕ್ತಿಗೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವರೂ ಆಗಿರುವ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಇಂದು ಮಧ್ಯಾಹ್ನ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್ ದೀಪ್ ಕುಮಾರ್ ಜೈನ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗದ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Free bus: ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಮಧ್ಯಾಹ್ನ 1 ಗಂಟೆಯಿಂದ ಮಹಿಳೆಯರಿಗೆ ಫ್ರೀ ಬಸ್ ಸೇವೆ ಜಾರಿ