ಮಂಗಳೂರು: ನಗರದ ಧಕ್ಕೆಯ ಅಳಿವೆ ಬಾಗಿಲಿನಲ್ಲಿ 6 ಮಂದಿ ಮೀನುಗಾರರನ್ನು ಬಲಿ ಪಡೆದಿರುವ ಪರ್ಸಿನ್ ಬೋಟ್ ದುರಂತದಲ್ಲಿ ಉಳಿದ 19 ಮಂದಿ ಮೀನುಗಾರರ ಪ್ರಾಣವನ್ನು ಸಮಯಪ್ರಜ್ಞೆ ಮೆರೆದು ರಕ್ಷಿಸುವ ಮೂಲಕ ಬೆಂಗ್ರೆಯ ನಿಜಾಮುದ್ದೀನ್ ಎಂಬ ಯುವಕ ಸಾಹಸ ಮೆರೆದಿದ್ದಾರೆ.ಇವರೊಂದಿಗೆ ಇಜಾಜ್, ಶರಾಫತ್ ಕೈಜೋಡಿಸಿದ್ದಾರೆ.
ಭಾನುವಾರ ಮುಂಜಾನೆ ಮಂಗಳೂರಿನ ಧಕ್ಕೆಯಿಂದ ಹೊರಟ ಶ್ರೀರಕ್ಷಾ ಎಂಬ ಪರ್ಸಿನ್ ಬೋಟ್ 25 ಮಂದಿ ಮೀನುಗಾರರನ್ನು ಹೇರಿಕೊಂಡು ಮೀನುಗಾರಿಕೆಗೆಂದು ತೆರಳಿತ್ತು. ಸಂಜೆ ಏಳು ಗಂಟೆಗೆ ಮೀನುಗಾರಿಕೆ ನಡೆಸಿ ಮತ್ತೆ ದಡ ಸೇರಲು ಇನ್ನೇನು 8 ನಾಟಿಕಲ್ ಮೈಲಿ ದೂರ ಇದೆ ಅನ್ನುವಾಗ ಆಕಸ್ಮಿಕವಾಗಿ ಬೋಟ್ ಒಂದು ಕಡೆಗೆ ವಾಲುತ್ತಿರುವುದು ನಿಜಾಮುದ್ದೀನ್ ಗಮನಕ್ಕೆ ಬಂದು ಇವರನ್ನು ಕಾಪಾಡಿದ್ದಾರೆ.
ನಿಜಾಮುದ್ದೀನ್ ಘಟನೆಯ ಬಗ್ಗೆ ಮಾಹಿತಿ ನೀಡುತ್ತಾ, ಅಪಾಯದ ಮುನ್ಸೂಚನೆ ಅರಿವಾಗುತ್ತಲೇ ನಾನು ಬೋಟ್ ನಲ್ಲಿದ್ದ ಎಲ್ಲ ಮೀನುಗಾರರಿಗೂ ದೋಣಿ ಮಗುಚಿ ಬೀಳುವ ಬಗ್ಗೆ ತಿಳಿಸಿದೆ. ಬೋಟು ಸಮುದ್ರದಲ್ಲಿ ಮುಳುಗುತ್ತಿದ್ದಂತೆ ಎಲ್ಲರೂ ಚೆಲ್ಲಾ - ಪಿಲ್ಲಿಯಾಗಿ ನೀರಿಗೆ ಬಿದ್ದೆವು. ಆ ಕತ್ತಲಲ್ಲೂ ಎಲ್ಲರ ಕಣ್ಣಿಗೂ ಕಂಡದ್ದು ಡಿಂಗಿ ದೋಣಿ. ಆದರೆ, ಆ ಸಮಯದಲ್ಲಿ ಪರ್ಸಿನ್ ಬೋಟ್‌ಗೆ ಕಟ್ಟಲಾಗಿದ್ದ ಡಿಂಗಿ ದೋಣಿಯ ಹಗ್ಗವನ್ನು ತುಂಡರಿಸುವ ಜಾಣ್ಮೆ ಯಾರಲ್ಲೂ ಇರಲೇ ಇರಲಿಲ್ಲ. ಈ ವೇಳೆ ನನ್ನ ಕಣ್ಣಿಗೆ ಚಾಕುವೊಂದು ಕಾಣಿಸಿತು. ಚಾಕುವಿನಿಂದ ಹಗ್ಗ ತುಂಡರಿಸಿದೆ. ಇದೇ ವೇಳೆ ಬೆಂಗ್ರೆಯ ಇಜಾಝ್, ಶರಾಫತ್ ಸಹಾಯದಿಂದ ಶೀಘ್ರವೇ ಹಗ್ಗ ತುಂಡರಿಸಲು ಸಾಧ್ಯವಾಯಿತು ಎಂದು ನಿಝಾಮುದ್ದೀನ್ ಅಂದಿನ ಘಟನೆಯನ್ನು ವಿವರಿಸುತ್ತಾರೆ.
ಎಲ್ಲರೂ ಒಂದು ಸಲಕ್ಕೆ ಪ್ರಾಣಭಯದಿಂದ ಪಾರಾಗಿ ಡಿಂಗಿಯಲ್ಲಿದ್ದ ಮೀನುಗಾರರತ್ತ ಗಮನ ಹರಿಸಿದಾಗ ಕೆಲವರು ಕಣ್ಮರೆಯಾಗಿರುವುದು ಕಂಡುಬಂತು. ಬೋಟಿನ ಕ್ಯಾಬಿನ್‌ನಲ್ಲಿ ಕೆಲವರು ಮೀನುಗಾರರು ಉಳಿದುಕೊಂಡಿದ್ದರು. ಇನ್ನು ಡಿಂಗಿಯಲ್ಲಿ ಕುಳಿತಿದ್ದರೂ ನಾವು ಸುರಕ್ಷಿತವಾಗಿ ಮನೆ ಸೇರುವ ಆಸೆಯನ್ನೇ ಕೈಬಿಟ್ಟಿದ್ದೆವು. ರಾತ್ರಿ ವೇಳೆ ಸುತ್ತಲೂ ಕತ್ತಲು. ದೊಡ್ಡ ಅಲೆಯೊಂದು ಬಂದರೆ ಎಲ್ಲರೂ ಸಮುದ್ರಪಾಲು ಎಂಬುದು ಖಚಿತವಾಗಿತ್ತು. ಕಣ್ಣೀರ ಕೋಡಿ ಹರಿದಿತ್ತು. ಅಲೆಗಳ ಹೊಡೆತಕ್ಕೆ ಜೀವ ಬಾಯಿಗೆ ಬಂದಂತಾಗುತ್ತಿತ್ತು.
ಪ್ರಾಣಭಯದಲ್ಲೇ ರಾತ್ರಿಪೂರ್ತಿ ಕಳೆದೆವು. ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ‘ಚಾಮುಂಡೇಶ್ವರಿ’ ಹೆಸರಿನ ಪರ್ಸಿನ್ ಬೋಟ್ ಬಂದಿತು. ದೂರದಿಂದಲೇ ಬೋಟು ಕಾಣಿಸುತ್ತಿದ್ದಂತೆ ಬಾವುಟವೊಂದನ್ನು ತೋರಿಸಿ ಕರೆದೆವು. ಬಳಿಕ ಸಂಕಷ್ಟದಿಂದ ಪಾರಾಗಿ ಮನೆಗೆ ಬಂದೆವು. ಹಡಗಿನಲ್ಲಿ 18 ಟನ್ ಮಾತ್ರವೇ ಮೀನು ಹಾಕಿದ್ದೆವು. ಘಟನೆಗೆ ನೈಜ ಕಾರಣ ಗೊತ್ತಿಲ್ಲ. ಕೋಸ್ಟ್ ಗಾರ್ಡ್‌ನಿಂದ ಕ್ರೇನ್ ಬಳಸಿ ಕಾರ್ಯಾಚರಣೆ ನಡೆಸಿದ್ದರೆ ಹಲವು ಮೀನುಗಾರರ ಜೀವ ಉಳಿಯುತ್ತಿತ್ತು ಎಂದು ನಿಜಾಮುದ್ದೀನ್ ಘಟನೆಯ ಭೀಕರ ಕ್ಷಣಗಳನ್ನು ತಿಳಿಸಿದ್ದಾರೆ.