ಮಂಗಳೂರು: ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳ ದೇಶಾದ್ಯಂತ ಹೆಸರುವಾಸಿವಾಗಿದೆ. ಕಂಬಳ ಕರಾವಳಿ ಜನತೆಯ ಅಚ್ಚುಮೆಚ್ಚಿನ ಕ್ರೀಡೆಯಾಗಿರುವ ಜತೆಗೆ ದೇಶಿ, ವಿದೇಶಿ ಪ್ರವಾಸಿಗರ ಆಕರ್ಷಣೆಯಾಗಿಸುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನವೊಂದನ್ನು ಮಾಡಲಾಗಿದೆ.
ಮಂಗಳೂರಿನಲ್ಲಿನ ಸಮುದ್ರ ತೀರ, ಬಂದರು, ದೇವಸ್ಥಾನಗಳ ಕಾರಣಕ್ಕೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಂಬಳದ ಸೊಬಗನ್ನು ತೋರಿಸಬೇಕೆನ್ನುವ ಪ್ರಯತ್ನವೊಂದು ಆರಂಭವಾಗಿದೆ. ಮಾರ್ಚ್ 6 ಮತ್ತು 7 ರಂದು ಮಂಗಳೂರು ನಗರದಲ್ಲಿ 'ಮಂಗಳೂರು ಕಂಬಳ' ನಡೆಯಲಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿರುವ ಬೆಂಗಳೂರಿನ 40ಕ್ಕೂ ಅಧಿಕ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಯವರಿಗೆ ಈ ಕಂಬಳದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಈ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಯವರು ಕಂಬಳವನ್ನು ವೀಕ್ಷಿಸಿದರೆ, ಮುಂದಿನ ವರ್ಷಗಳಿಂದ ಪ್ರವಾಸಿಗರನ್ನು ಪ್ರವಾಸ ಯೋಜನೆ ರೂಪಿಸುವಾಗ ಈ ಕಂಬಳ ವೀಕ್ಷಿಸಲು ಕರಾವಳಿಗೆ ಕರೆ ತರಬಹುದು ಎಂಬುದು ಲೆಕ್ಕಾಚಾರ.
ಕರಾವಳಿಯಲ್ಲಿ ಕಂಬಳ ನಡೆಯುವ ಸೀಸನ್ನಲ್ಲಿ ಟೂರ್ಸ್ ಪ್ಲ್ಯಾನ್ ಮಾಡಲು ಟೂರ್ಸ್ ಆ್ಯಂಡ್ ಟ್ರಾವೆಲ್ ಸಂಸ್ಥೆಯವರು ಪ್ರಯತ್ನ ಮಾಡಿದರೆ ಪ್ರವಾಸಿಗರನ್ನು ಕಂಬಳದಲ್ಲಿ ಸೆಳೆಯಲು ಸಾಧ್ಯವಾಗಲಿದೆ. ಇನ್ನೂ ವಿದೇಶಿ ಪ್ರವಾಸಿಗರು ಪ್ರವಾಸಿ ಹಡಗು ಮೂಲಕ ಮಂಗಳೂರಿಗೆ ಬರುತ್ತಲೇ ಇರುತ್ತಾರೆ. ಒಂದೊಂದು ಹಡಗು ಬಂದಾಗ ಒಂದು ಸಾವಿರದಷ್ಟು ವಿದೇಶಿಗರು ಮಂಗಳೂರಿಗೆ ಬರುತ್ತಾರೆ. ಮುಂದೆ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆ ಮೂಲಕ ಕಂಬಳ ನಡೆಯುವ ಸಂದರ್ಭಕ್ಕೆ ಅವರ ಪ್ರವಾಸದ ಹೊಂದಾಣಿಕೆ ಮಾಡಿದರೆ ಅವರಿಗೂ ಕರಾವಳಿ ಕಂಬಳದ ಆಕರ್ಷಣೆ ನೀಡಲಾಗುತ್ತದೆ ಎನ್ನುತ್ತಾರೆ ಮಂಗಳೂರು ಕಂಬಳ ಆಯೋಜಕ ಕ್ಯಾ. ಬ್ರಿಜೇಶ್ ಚೌಟ ಅವರು.
ಈ ಸುದ್ದಿಯನ್ನೂ ಓದಿ: ಮುಂಡಾಸು ಬಿಗಿದು ಕಂಬಳ ಗದ್ದೆಗಿಳಿದ ‘ತುಳುನಾಡ ಪೊಣ್ಣು’.. ಹೊಸ ಅಧ್ಯಾಯ ಬರೆದ ‘ಕುಂದಾಪುರದ ಬಾಲೆ’
ಒಟ್ಟಿನಲ್ಲಿ ಕರಾವಳಿಯ ಜಾನಪದ ಕ್ರೀಡೆ ಹಲವು ಹೊಸತುಗಳೊಂದಿಗೆ ಜನಾಕರ್ಷಣೆಗೆ ಪಾತ್ರವಾಗಿದೆ. ಇದೀಗ ಕರಾವಳಿ ಜನರ ಹೆಮ್ಮೆಯ ಕ್ರೀಡೆ ಕಂಬಳಕ್ಕೆ ದೇಶ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಈ ಹೊಸ ಪ್ರಯತ್ನ ನಡೆದಿದೆ.