ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ರಕ್ಷಣಾ ಕಾರ್ಯಾಚರಣೆ ನಡೆಸಲು ಕೇಂದ್ರದ ಎನ್‌ಡಿಆರ್‌ಎಫ್ ಪಡೆಯು ಸನ್ನದ್ಧವಾಗಿದ್ದು, ಜಿಲ್ಲೆಯಲ್ಲಿ ಮೂರು ತಿಂಗಳು ಮೊಕ್ಕಾಂ ಹೂಡಲಿದೆ.
ಎನ್‌ಡಿಆರ್‌ಎಫ್ ತಂಡವು ಪೂರ್ವಭಾವಿಯಾಗಿ ಪರಿವೀಕ್ಷಣೆ ನಡೆಸಲು ಈಗಾಗಲೇ ಸಸಿಹಿತ್ಲು ಮುಂಡ ಬೀಚ್, ತಣ್ಣೀರುಬಾವಿ ಬೀಚ್, ಮುಕ್ಕ ಬೀಚ್ ನಲ್ಲಿ ಕಾರ್ಯಪಡೆ ವೀಕ್ಷಣೆ ನಡೆಸಿದೆ. ಮುಂದಿನ ದಿನಗಳಲ್ಲಿ ಈ ತಂಡವು ಉಳ್ಳಾಲ ಸಹಿತ ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗಕ್ಕೂ ತೆರಳಲಿದೆ. ಈ ಮೂಲಕ ಎನ್‌ಡಿಆರ್‌ಎಫ್ ಪಡೆಯು ಮುಂದಿನ ಮೂರು ತಿಂಗಳು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಲಿದೆ ಎಂದು ತಿಳಿದು ಬಂದಿದೆ.
ಎನ್‌ಡಿಆರ್‌ಎಫ್‌ನ ಇನ್ಸ್ಪೆಕ್ಟರ್ ರಾಜೇಶ್ ಪ್ರಸಾದ್ ಚೌಧರಿ ಕಾರ್ಯ ಪಡೆಯ ಬಗ್ಗೆ ಮಾಹಿತಿ ನೀಡಿ, ಕರ್ನಾಟಕದಲ್ಲಿ 9ರಿಂದ 10 ಎನ್‌ಡಿಆರ್‌ಎಫ್ ಕಾರ್ಯ ಪಡೆಯನ್ನು ವಿವಿಧ ತಂಡವಾಗಿ ಕಾರ್ಯಾಚರಣೆಗೆ ಸಿದ್ಧಗೊಳಿಸಲಾಗಿದೆ ಎಂದರು.
ಒಂದು ತಂಡದಲ್ಲಿ 20 ಮಂದಿ ಇರಲಿದ್ದು, ಪ್ರಾಕೃತಿಕವಾಗಿ ದುರಂತ ಸಂಭವಿಸಿದಲ್ಲಿ ರಕ್ಷಣೆ ನೀಡುವ ಪರಿಣಿತ ತಂಡ ನಮ್ಮದಾಗಿದೆ. ವಿಶೇಷ ಬಸ್, ಬೋಟ್, ಜಾಕೆಟ್, ಆಕ್ಸಿಜನ್ ಕಿಟ್, ಪ್ರಥಮ ಚಿಕಿತ್ಸೆ, ಯಾವುದೇ ದುರ್ಗಮ ಪ್ರದೇಶಕ್ಕೆ ತೆರಳಲು ಹಗ್ಗದ ಸೇತುವೆ, ಕಲ್ಲು ಬಂಡೆಗಳನ್ನು ಕೊರೆಯುವ ಅತ್ಯಾಧುನಿಕ ಯಂತ್ರಗಳು, ಜನರೇಟರ್, ವಿವಿಧ ಬಗೆಯ ಲೈಟ್‌ಗಳನ್ನು ಹೊಂದಿದ್ದೇವೆ. ಜಿಲ್ಲೆಯ ಅಪಾಯಕಾರಿ ಪ್ರದೇಶಗಳನ್ನು ಮೊದಲು ಪರಿವೀಕ್ಷಣೆ ನಡೆಸಲಿದ್ದು, ದಿನದ 24 ಗಂಟೆಯೂ ನಾವು ಸನ್ನದ್ಧರಾಗಿರುತ್ತೇವೆ ಎಂದು ಹೇಳಿದರು.
ಓದಿ: ತೌಕ್ತೆ ಚಂಡಮಾರುತ ಎಫೆಕ್ಟ್: ಉತ್ತರ ಕನ್ನಡದಲ್ಲಿ ಒಂದೇ ದಿನ 92 ಮನೆಗಳಿಗೆ ಹಾನಿ!