ಮಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಫೇಸ್ ಲೆಸ್ ಆಗಿದೆ. ಅದಕ್ಕೆ ಯಾವ ಮುಖವೂ ಇಲ್ಲ. ಜೆಡಿಎಸ್ ಅನ್ನು ಸಮರ್ಥಿಸುವುದಿಲ್ಲ. ಆದರೆ ಎರಡು ವರ್ಷ ಗುಜರಾತ್ದಿಂದ ಗಡಿ ಪಾರಾಗಿದ್ದ ವ್ಯಕ್ತಿ ಹೇಳುವಂಥ ಮಾತು ಇದು. ಬಿಜೆಪಿ ಏನಾದರೂ ಮಾಡುತ್ತಿದೆಯ? ನ್ಯಾಯಯುತವಾಗಿ ಆಯ್ಕೆಯಾದ ಸರ್ಕಾರಗಳನ್ನು ಕಸಿದುಕೊಳ್ಳುವ ಕೆಲಸ ಮಾತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಒಕ್ಕೂಟ ವ್ಯವಸ್ಥೆ ಬಗ್ಗೆ ಶಾ ಗೆ ಗೊತ್ತಿಲ್ಲ : ಇನ್ನು ಅಮುಲ್ ಜತೆ ನಂದಿನಿ ವಿಲೀನ ಪ್ರಸ್ತಾಪ ಅವಿವೇಕತನದ್ದು. ಒಕ್ಕೂಟ ವ್ಯವಸ್ಥೆ ಬಗ್ಗೆ ಅಮಿತ್ ಶಾ ಗೆ ಗೊತ್ತಿಲ್ಲ. ನಂದಿನಿ ಯನ್ನು ಅಮುಲ್ ದೊಂದಿಗೆ ವಿಲೀನಗೊಳಿಸುವುದು ಒಕ್ಕೂಟ ವ್ಯವಸ್ಥೆ ಶಿಥಿಲಗೊಳಿಸುವ ಕ್ರಮ ಆಗಿದೆ. ರಾಜ್ಯದಲ್ಲಿ, ದೇಶದಲ್ಲಿ ಆರ್ಥಿಕ ಸುಸ್ಥಿರತೆ, ಸಾಮಾಜಿಕ ನೆಮ್ಮದಿ ಇಲ್ಲ. ಜಿಡಿಪಿ ಕನಿಷ್ಠ ಹಂತಕ್ಕೆ ಬಂದಿದೆ. ಈವರೆಗೆ ರಾಜ್ಯದಲ್ಲಿ, ದೇಶದಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆ ಅದು ಕಾಂಗ್ರೆಸ್ ಅಧಿಕಾರದಲ್ಲಿ ನಡೆದಿರುವುದು. ಕಾಂಗ್ರೆಸ್ ಪಕ್ಷ ಮೃದು ಹಿಂದುತ್ವ, ಕಟು ಹಿಂದುತ್ವ ಅನುಸರಿಸುವುದಿಲ್ಲ ಎಂದು ಮೊಯ್ಲಿ ಹೇಳಿದರು.
ವಿಧಾನಸಭೆಗೆ ಸ್ಪರ್ಧೆ ಇಲ್ಲ: ನಾನು ರಾಜ್ಯ ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ. ನನ್ನ ಮಗನು ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ. ಕಾರ್ಕಳದಲ್ಲಿ ನಾನು ಸ್ಪರ್ಧಿಸುವ ವಿಚಾರ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಬಗ್ಗೆ ನಾವು ಮಾಡಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ವರದಿಯನ್ನು ಎಐಸಿಸಿ ಅಧ್ಯಕ್ಷರಿಗೆ ಮತ್ತು ಸೋನಿಯಾ ಗಾಂಧಿ ಅವರಿಗೆ ಕಳುಹಿಸಿದ್ದೇನೆ ಎಂದರು.
ಮತೀಯ ಹೇಳಿಕೆಗೆ ಪ್ರತಿಕ್ರಿಯೆ ಬೇಡ: ಬಿಜೆಪಿ ಅವರು ನೀಡುವ ಮತೀಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದನ್ನು ಕಾಂಗ್ರೆಸ್ ಮುಖಂಡರು ನಿಲ್ಲಿಸಬೇಕು. ಅವರು ಬಯಸುವುದು ಅದನ್ನೇ, ಹೀಗಾಗಿ ಕ್ರಿಯೆ ಪ್ರತಿಕ್ರಿಯೆಗಳಿಂದ ಗೊಂದಲಗಳು ಹೆಚ್ಚಾಗುತ್ತಿವೆ ಎಂದು ವೀರಪ್ಪ ಮೊಯ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಜಾಗತಿಕತೆ ನಾಗರಿಕತೆ ಬಗ್ಗೆ ಪುಸ್ತಕವೊಂದನ್ನು ಬರೆಯುತ್ತಿದ್ದೇನೆ. ಈಗಾಗಲೇ ಪುಸ್ತಕ ಬರೆಯಲಾರಂಭಿಸಿದ್ದು, ಇನ್ನೂ ಒಂದು ವರ್ಷದಲ್ಲಿ ಪುಸ್ತಕ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಕ್ಕೆ ಬಿಜೆಪಿ ತಿರುಗೇಟು.. ಅಮೂಲ್ ಮತ್ತು ನಂದಿನಿ ವಿಲೀನಗೊಳಿಸಲು ಕೇಂದ್ರ ಸಹಕಾರ ಸಚಿವರೂ ಆಗಿರುವ ಗೃಹ ಸಚಿವ ಅಮಿತ್ ಶಾ ಮುಂದಾಗಿದ್ದಾರೆ ಎಂಬ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಪ್ರತಿಕ್ರಿಯಿಸಿ, ಪ್ರತಿಪಕ್ಷದ ನಾಯಕರು ಕೇವಲ ಊಹಾಪೋಹದಿಂದ ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನೂ 100 ವರ್ಷವಾದರೂ ನಂದಿನಿ ಬ್ರಾಂಡ್ ಅಜರಾಮರ. ಅಮಿತ್ ಶಾ ಅವರು ಸಹ ಈ ಬಗ್ಗೆ ಹೇಳಿದ್ದೇ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಬ್ಬರಿಗೊಬ್ಬರು ಸಹಕಾರದಿಂದ ನಂದಿನಿ ಮತ್ತು ಅಮುಲ್ ಹೋಗಬೇಕು. ತಾಂತ್ರಿಕವಾಗಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂಬುದು ಅವರ ಮಾತಿನ ಉದ್ದೇಶವಾಗಿತ್ತು. ಅಮುಲ್ ಅವರದ್ದು ಅವರಿಗೆ ಇರುತ್ತದೆ, ನಮ್ಮ ನಂದಿನ ನಮಗೆ ಇರುತ್ತದೆ. ಕೆಲವು ಏರಿಯಾಗಳಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದರೆ ಲಾಭ ಇರುತ್ತದೆ. ಕೆಲ ಭಾಗದಲ್ಲಿ ತಾಂತ್ರಿಕ, ಆಡಳಿತ ವಿಚಾರಗಳನ್ನು ಶೇರ್ ಮಾಡಿಕೊಂಡು ಕೆಲಸ ನಿರ್ವಹಿಸಬಹುದು ಅಂತ ಅಮಿತ್ ಶಾ ಹೇಳಿರೋದು ಎಂದು ಸಿಎಂ ಸಮರ್ಥಿಸಿಕೊಂಡಿದ್ದರು.
ಸಹಕಾರ ಸಚಿವರಿಂದಲೂ ಸ್ಪಷ್ಟನೆ.. ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಸಹ ಇದೇ ವಿಚಾರ ಕುರಿತು ಮಾತನಾಡಿ, ಪ್ರತಿಪಕ್ಷದವರು ಚುನಾವಣಾ ಗಿಮಿಕ್ಗಾಗಿ ಡೈರಿ ವಿಲೀನ ವಿವಾದ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಮಿತ್ ಶಾ ಅವರು ವಿಲೀನದ ಬಗ್ಗೆ ಮಾತನಾಡಿಲ್ಲ ಎಂದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂಓದಿ:ಅಮುಲ್ ಜೊತೆ ನಂದಿನಿ ವಿಲೀನವಿಲ್ಲ, 100 ವರ್ಷವಾದರೂ ನಂದಿನಿ ಅಸ್ತಿತ್ವ ಇರಲಿದೆ: ಸಿಎಂ ಬೊಮ್ಮಾಯಿ