ಮಂಗಳೂರು: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಪಸರಿಸಲು ಅಹಮದಾಬಾದ್ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ ಎಂದು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಆಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ. 24 ರಂದು ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ 1 ಲಕ್ಷ 25 ಸಾವಿರ ಜನ ಭಾಗವಹಿಸಿದ್ದರು. ಇದರಲ್ಲಿ ಟ್ರಂಪ್ ಭದ್ರತೆಯ ಸಿಬ್ಬಂದಿ ಸೇರಿದಂತೆ 20 ಸಾವಿರ ಮಂದಿ ವಿದೇಶಿಗರಿದ್ದರು. ಆ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ಅಮೆರಿಕದಲ್ಲಿ ಕೊರೊನಾ ಹಬ್ಬಿತ್ತು. ಇದೇ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಜಾತ್ರೆ, ರಾಮನವಮಿ ಮಾಡಿದ್ದರು. ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆದ ಗುಜರಾತ್ ಮತ್ತು ಅದರ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬಲು ಈ ಕಾರ್ಯಕ್ರಮ ಕಾರಣ ಎಂದು ಅವರು ಆರೋಪಿಸಿದ್ದಾರೆ.ಅಹಮದಾಬಾದ್ ನಗರದಲ್ಲಿ ಡೆತ್ ರೇಟ್ ಬೇರೆ ಕಡೆಗಿಂತ ಹೆಚ್ಚಿದೆ. ಇದಕ್ಕೆಲ್ಲಾ ನಮಸ್ತೆ ಟ್ರಂಪ್ ಕಾರ್ಯಕ್ರಮ ಕಾರಣ. ಆದರೆ ಇದನ್ನು ಮುಚ್ಚಿಟ್ಟು ಕೇವಲ ತಬ್ಲಿಘಿ, ನಿಜಾಮುದ್ದೀನ್ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಡಬ್ಲ್ಯೂಹೆಚ್ಓ ತಿಳಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.