ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ವೇದಿಕೆ ವತಿಯಿಂದ ಪ್ರತೀ ವರ್ಷ ಕೊಡಲಾಗುವ "ಬ್ರಹ್ಮಶ್ರೀ" ಪ್ರಶಸ್ತಿಗೆ ಈ ಬಾರಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಫೆ. 28ರಂದು ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣ ತಿಳಿಸಿದ್ದಾರೆ.
ತೊಕ್ಕೊಟ್ಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಿಕೆಯ ವತಿಯಿಂದ ಫೆ. 28ರಂದು ಬೆಳಗ್ಗೆ ತೊಕ್ಕೊಟ್ಟು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ "ಮೆರುಗು 2021" ಪ್ರತಿಭಾ ಅನಾವರಣದ ಹೊಸ್ತಿಲು ಕಾರ್ಯಕ್ರಮದಲ್ಲಿ ನೃತ್ಯ ಸ್ಫರ್ಧೆ, ಆಯುಷ್ಮಾನ್ ಕಾರ್ಡ್ ಮತ್ತು ಶೈಕ್ಷಣಿಕ ಶಾಲಾ ಶುಲ್ಕ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಳಮಟ್ಟದ ಕಾರ್ಯಕರ್ತನಾಗಿ ಬೆಳೆದು, ಇಂದು ಉನ್ನತ ಸಾಧನೆಗೈದಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಸಾಲಿನ ಪ್ರತಿಷ್ಠಿತ "ಬ್ರಹ್ಮಶ್ರೀ" ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಯುಷ್ಮಾನ್ ಕಾರ್ಡ್ ವಿತರಿಸಲಿದ್ದಾರೆ. ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಾಡಿನ ಪ್ರಮುಖರು, ವಿವಿಧ ಕ್ಷೇತ್ರದ ಸಾಧಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಓದಿ : ಮಂಗಳೂರಿನ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಮತ್ತೆ ಕಾಂಡೋಮ್ ಪತ್ತೆ
ವೇದಿಕೆಯ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಮಾತನಾಡಿ, ಮೆರುಗು ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜ ಬಾಂಧವರಿಗೆ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಜನಪದ ಮತ್ತು ಭಕ್ತಿಗೀತೆ ನೃತ್ಯ ಸ್ಫರ್ಧೆ ನಡೆಯಲಿದೆ. ಮಂಗಳೂರು ವಿಧಾಸಭಾ ಕ್ಷೇತ್ರ ವ್ಯಾಪ್ತಿಯ 16 ಗ್ರಾಮಗಳಿಂದ ಆಯ್ದ ಸ್ಫರ್ಧಿಗಳು ಸ್ಫರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನ ನೀಡಲಾಗುವುದು. ಕಳೆದ ವರ್ಷ ಕೊರೊನಾ ಲಾಕ್ಡೌನ್ ಇದ್ದ ಕಾರಣ ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯ ನಡೆದಿರಲಿಲ್ಲ. ಈಗ ಮಕ್ಕಳಿಗೆ ಶಾಲೆ ಪ್ರಾರಂಭವಾಗಿದ್ದು, ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ವೇದಿಕೆಯ ವತಿಯಿಂದ ದತ್ತು ಸ್ವೀಕರಿಸಲಾದ ವಿದ್ಯಾರ್ಥಿಗಳ ಶೈಕ್ಷಣಿಕ ಶಾಲಾ ಶುಲ್ಕವನ್ನು ವಿತರಿಸಲಾಗುವುದು ಎಂದರು.