ಪುತ್ತೂರು(ದ.ಕ) : ಕೊರೊನಾ ಎರಡನೇ ಅಲೆಯಲ್ಲಿ ಸಂಭವಿಸುತ್ತಿರುವ ಪ್ರಾಣಹಾನಿಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ತಾನೆಂದು ಹೇಳಿಕೊಳ್ಳುತ್ತಾ ದೇಶಭಕ್ತ ಪಕ್ಷ ಎಂದು ಹೇಳಿಕೊಂಡು ಬಂದಿದ್ದ ಕಾಂಗ್ರೆಸ್ ಇಂದು ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಪಾದಿಸಿದರು.
ಪುತ್ತೂರು ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ವಿಜ್ಞಾನಿಗಳಿಗೆ ಪ್ರೇರಣೆ ನೀಡಿ ಕೋವಿಡ್ ಲಸಿಕೆ ಆವಿಷ್ಕಾರ ಮಾಡಲಾಯಿತು. ಆದರೆ, ಇದರ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಿದ ಕಾಂಗ್ರೆಸ್, ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಲೇವಡಿ ಮಾಡಿತು.
ರಾಹುಲ್ ಗಾಂಧಿ, ಸಿದ್ಧರಾಮಯ್ಯ ಮುಂತಾದ ನಾಯಕರೆಲ್ಲ ಲಸಿಕೆಯನ್ನು ಟೀಕೆ ಮಾಡಿ ಜನರನ್ನು ನಿರುತ್ತೇಜನಗೊಳಿಸಿದರು. ಇದರಿಂದ ಆರಂಭದಲ್ಲಿ ಜನ ಲಸಿಕೆ ಪಡೆಯಲು ಮುಂದೆ ಬರಲೇ ಇಲ್ಲ. ಇವತ್ತು ಸಂಭವಿಸುತ್ತಿರುವ ಪ್ರಾಣ ಹಾನಿಗಳಿಗೆ ಇದೇ ಕಾರಣ. ಹೀಗಾಗಿ, ಕೋವಿಡ್ ಮರಣ ಸರಣಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದರು.
ಅಂದು ಲಸಿಕೆ ಪಡೆಯದಂತೆ ಜನರನ್ನು ದೂರ ಮಾಡಿದ ಕಾಂಗ್ರೆಸ್ ನಾಯಕರು, ಇಂದು ಅವರೆಲ್ಲ ಲಸಿಕೆ ಪಡೆದುಕೊಂಡಿದ್ದಾರೆ ಮತ್ತು ಲಸಿಕೆ ಇಲ್ಲ ಎಂದು ಬೀದಿ ರಂಪ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದೆ. ಮೋದಿ ಸರಕಾರ ಕೊರೊನಾ ತಡೆಯುವಲ್ಲಿ ವಿಫಲವಾಗಿದೆ ಎಂದು ಬಿಂಬಿಸಲು ಅದು ಟೂಲ್ ಕಿಟ್ ತಂತ್ರಗಾರಿಕೆ ಮಾಡುತ್ತಿದೆ.
ಶವ ಸುಡುವ, ನದಿಯಲ್ಲಿ ಶವಗಳು ತೇಲುವ, ಆಕ್ಸಿಜನ್ ಅಭಾವ ಇರುವ ದೃಶ್ಯ ಚಿತ್ರೀಕರಿಸಿ ಅವು ಸೋಶಿಯಲ್ ಮೀಡಿಯಾಗಳಲ್ಲಿ ವಿಜೃಂಭಿಸುವಂತೆ ಮಾಡುತ್ತಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದರು.
ಕುಂಭಮೇಳವು ಕೊರೊನಾ ಪಾಲಿಗೆ ಸೂಪರ್ ಸ್ಪ್ರೆಡರ್ ಆಗಿದೆ, ದೇಶದ ನೂತನ ಸಂಸತ್ ಭವನವು ಮೋದಿ ಅವರ ಮನೆ ಎಂಬುದೆಲ್ಲ ಅಪಪ್ರಚಾರ ಮಾಡಲಾಗಿದೆ. ಕಾಂಗ್ರೆಸ್ ಇಂಥ ಹೀನ ಕೃತ್ಯವನ್ನು ಕೈಬಿಟ್ಟು ರಾಷ್ಟ್ರೀಯ ಸಂಕಟವನ್ನು ಎದುರಿಸುವಲ್ಲಿ ಸರಕಾರದ ಜತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಶಾಸಕರು ಸೇರಿ 100 ಕೋಟಿ ರೂ. ಒಟ್ಟು ಮಾಡಿ ಲಸಿಕೆ ಅಭಿಯಾನಕ್ಕೆ ನೀಡುವುದಾಗಿ ಹೇಳಿ ಆ ಪಕ್ಷದ ನಾಯಕರು ದೊಡ್ಡಮಟ್ಟದ ಪ್ರಚಾರ ಪಡೆದುಕೊಂಡಿದ್ದಾರೆ. ಆದರೆ, ಅವರು ಕೊಡುವ ಹಣ ಶಾಸಕರಿಗೆ ಸರ್ಕಾರ ನೀಡುವ ಅನುದಾನದ ಮೊತ್ತವನ್ನು, ಸಾರ್ವಜನಿಕರಿಂದ ಸಂಗ್ರಹಿಸಿದ್ದನ್ನಲ್ಲ.
ಹೀಗಿರುವಾಗ ಇದರಲ್ಲಿ ಕಾಂಗ್ರೆಸ್‌ನ ಕೀರ್ತಿ ಏನಿದೆ? ಬಿಜೆಪಿ ಸಂಸದರು ತಮ್ಮ ನಿಧಿಯಿಂದ 2.5 ಕೋಟಿ ರೂ.ಗಳನ್ನು ಲಸಿಕೆ ಅಭಿಯಾನಕ್ಕೆ ನೀಡಲಿದ್ದಾರೆ. ಶಾಸಕರಿಗೂ ಸೂಚಿಸಿದ್ದೇವೆ. ಈ ರೀತಿ ಪ್ರಚಾರ ಪಡೆಯುವ ಬದಲು ಕಾಂಗ್ರೆಸಿಗರು ತಾವೇ ಸಂಗ್ರಹಿಸಿ ನೀಡಲಿ ಎಂದು ಸವಾಲು ಹಾಕಿದರು. ಬ್ಲ್ಯಾಕ್ ಫಂಗಸ್ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದರು.
ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.