ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಗರ ಪಂಚಮಿಯ ಸಂಭ್ರಮ ಮನೆ ಮಾಡಿದೆ. ನಾಗರ ಪಂಚಮಿಯನ್ನು ಕರಾವಳಿಯಲ್ಲಿ ಜನರು ವಿಶೇಷವಾಗಿ ಆಚರಿಸುತ್ತಾರೆ. ನಾಗದೇವರನ್ನು ಆರಾಧಿಸುವ ಈ ಹಬ್ಬದ ದಿನ ಹಾಲು, ಎಳನೀರು, ಹೂವು, ಸಿಂಗಾರದೊಂದಿಗೆ ನಾಗಬನಗಳಲ್ಲಿ ಭಕ್ತರ ದಂಡು ಕಾಣಿಸುತ್ತಿದೆ.
ಪ್ರಕೃತಿ ಆರಾಧನೆಯ ಮಹತ್ವ ಸಾರುವ ನಾಗರ ಪಂಚಮಿಗೆ ತುಳುನಾಡಿನಲ್ಲಿ ವಿಶೇಷ ಸ್ಥಾನಮಾನ ಇದೆ. ಪ್ರತಿ ಕುಟುಂಬದ ಮನೆಯ ನಾಗ ಬನದಲ್ಲಿ ಭಕ್ತರು ನಾಗಾರಾಧನೆ ನಡೆಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಗೆ ಪ್ರಸಿದ್ದಿ ಪಡೆದಿರುವ ಹಲವು ದೇವಸ್ಥಾನಗಳಿವೆ. ದಕ್ಷಿಣ ಭಾರತದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗಾರಾಧನೆ ಮಾಡಲಾಗುತ್ತದೆ. ಅದೇ ರೀತಿ ಮಂಗಳೂರು ಹೊರ ವಲಯದಲ್ಲಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿಯೂ ನಾಗರಾಧನೆ ಮಾಡಲಾಗುತ್ತದೆ. ನಾಗರ ಪಂಚಮಿ ದಿನ ಇಲ್ಲಿಗೆ ಭಕ್ತ ಸಾಗರವೇ ಹರಿದು ಬರುತ್ತದೆ.
ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಭಕ್ತರು ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ವಿವಿಧೆಡೆಯಿಂದ ನಾಗರಾಧನೆಗಾಗಿ ಭಕ್ತ ವೃಂದ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಸಂತಾನ ಪ್ರಾಪ್ತಿ, ಸರ್ಪ ದೋಷ ನಿವಾರಣೆಗೆ ಹೆಸರು ವಾಸಿಯಾಗಿರುವ ಸಾವಿರಾರು ವರ್ಷಗಳ ಇತಿಹಾಸವಿರುವ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ ಕಳೆಗಟ್ಟಿದೆ. ನಾಗ ಬನದಲ್ಲಿರುವ ವಿಗ್ರಹಗಳಿಗೆ ಹಾಲು ಹಾಗೂ ಎಳನೀರ ಅಭಿಷೇಕ ಮಾಡಿ, ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಗುತ್ತಿದೆ.
ನಾಗರ ಪಂಚಮಿ ಸಂಭ್ರಮ ಹಿನ್ನೆಲೆ ನಾಗಕ್ಷೇತ್ರಗಳು, ದೇವಾಲಯಗಳು ಹಾಗೂ ಕುಟುಂಬಗಳ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥನ ಸನ್ನಿಧಿ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಪಾಂಡೇಶ್ವರ ಮಹಾಲಿಂಗೇಶ್ವರ, ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ನಾಗನಕಟ್ಟೆ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ, ನೀರುಮಾರ್ಗ ಮಾಣೂರು ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಶ್ರೀ ದೇವಸ್ಥಾನ ಹಾಗೂ ಪಣಂಬೂರು ನಂದನೇಶ್ವರ ದೇವಳದಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯ ನೆರವೇರಿದೆ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗರ ಪಂಚಮಿ ಹಿನ್ನೆಲೆ ಬೆಳಗ್ಗೆ 5.30ರಿಂದ ನಾಗಬನದಲ್ಲಿ ನಾಗದೇವರಿಗೆ ಪಂಚಾಮೃತಾಭಿಷೇಕ, ಅಷ್ಟೋತ್ತರ ಅರ್ಚನೆ, ಕಲ್ಲೋಕ್ತ ಪೂಜೆ, ಸಹಸ್ರನಾಮಾರ್ಚನೆ, ತಂಬಿಲ ನಡೆದಿದೆ. ಬೆಳಗ್ಗೆ 6ರಿಂದ ನಾಗ ದೇವರಿಗೆ ಕ್ಷೀರ, ಸೀಯಾಳ ಸರ್ವ ಅಭಿಷೇಕ ನಡೆದಿದೆ. 12.30ಕ್ಕೆ ವರ್ಷ ಅಭಿಷೇಕ ಸಂಪನ್ನವಾಗಲಿದ್ದು, ಮಧ್ಯಾಹ್ನ 1ಕ್ಕೆ ನಾಗದೇವರಿಗೆ ಮಹಾಮಂಗಳಾರತಿ ನೆರವೇರಲಿದೆ.
ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಲ್ಲಿ ಬೆಳಗ್ಗೆ 10.30ರಿಂದ ಪಂಚಾಮೃತಾಭಿಷೇಕ, ಸಹಸ್ರ ನಾಮಾರ್ಚನೆ, ಅಮೃತಪಡಿ ನಂದಾ ದೀಪ, ವಿಶೇಷ ಹರಿವಾಣ ನೈವೇದ್ಯ ಸಮರ್ಪಣೆ, ಕಲ್ಲೋಕ್ತ ಪೂಜೆ, 11ಕ್ಕೆ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ, ಸಂಜೆ 6ರಿಂದ ದೇವಳದ ಚಂದ್ರಶಾಲೆಯಲ್ಲಿ ಆಶ್ಲೇಷ ಪೂಜೆ ನಂತರ ರಾತ್ರಿ ಮಹಾಪೂಜೆ ನೆರವೇರಲಿದೆ.
ಆದಿ ಸ್ಥಳಕ್ಕೆ ತೆರಳಿ ಪೂಜೆ: ಕರಾವಳಿಯಲ್ಲಿ ಪ್ರತಿ ಮನೆಯವರು ಗ್ರಾಮದ ನಾಗಬನ ಮತ್ತು ತಮ್ಮ ಆದಿ ಸ್ಥಳಕ್ಕೆ ತೆರಳಿ ತನು ಅರ್ಪಿಸುತ್ತಾರೆ. ಗ್ರಾಮ ಗ್ರಾಮದಲ್ಲಿ ನಾಗದೇವರ ಬನ ಇದೆ. ಅಷ್ಟು ಮಾತ್ರವಲ್ಲದೆ ಕುಟುಂಬಕ್ಕೆ ( ತಲೆಮಾರು) ಆದಿ ನಾಗ ಬನವಿದೆ. ಪ್ರತಿ ಕುಟುಂಬದವರು ತಮ್ಮ ಆದಿ ನಾಗ ಬನಕ್ಕೆ ಹೋಗಿ ಹಾಲು, ಸೀಯಾಳಾಭಿಷೇಕ ಮಾಡುತ್ತಾರೆ. ಇದರಲ್ಲಿ ಹೆಚ್ಚಾಗಿ ಮಹಿಳೆಯರೇ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ: ಹಾವೇರಿಯಲ್ಲಿ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ: ವಿಡಿಯೋ