ಉಪ್ಪಿನಂಗಡಿ (ದಕ್ಷಿಣ ಕನ್ನಡ): ಹಿಜಾಬ್ ಧರಿಸಿಯೇ ಕಾಲೇಜ್ ಪ್ರವೇಶಿಸುವುದಾಗಿ ಹೇಳಿದ್ದ ವಿದ್ಯಾರ್ಥಿನಿಯರಲ್ಲಿ 6 ಮಂದಿ ಸಮವಸ್ತ್ರ ನಿಯಮಾಳಿ ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗಿದ್ದಾರೆ. ಹಿಜಾಬ್ ಧರಿಸಿಯೇ ಕಾಲೇಜ್ ಪ್ರವೇಶಿಸುವುದಾಗಿ ಪಟ್ಟು ಹಿಡಿದು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಸಿದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ತರಗತಿ ಪ್ರವೇಶದ ನಿರ್ಬಂಧಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿಯರಲ್ಲಿ ಆರು ಮಂದಿ ವಿದ್ಯಾರ್ಥಿನಿಯರು ಇಂದು ಮತ್ತೆ ತರಗತಿಗೆ ಹಾಜರಾಗಿದ್ದಾರೆ.
ಕಾಲೇಜಿನ ಸಮವಸ್ತ್ರ ನಿಯಮಾಳಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದು, ಕಾಲೇಜಿನ ಪ್ರಾಂಶುಪಾಲರು ಇವರಿಗೆ ತರಗತಿಗೆ ಹಾಜರಾಗಲು ಅನುವು ಮಾಡಿಕೊಟ್ಟಿದ್ದಾರೆ. ಈ ಕಾಲೇಜಿನಲ್ಲಿ ಈಗಾಗಲೇ ಒಟ್ಟು 101 ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಇದ್ದು, ಈ ಪೈಕಿ 46 ವಿದ್ಯಾರ್ಥಿನಿಯರು ಬುಧವಾರ ಸಮವಸ್ತ್ರ ಹಾಗೂ ನಿಯಮ ಪಾಲನೆಯೊಂದಿಗೆ ಕಾಲೇಜಿಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಶಾಹಿ ಮಸೀದಿ ವರ್ಸಸ್ ಮಂದಿರ ವಿವಾದ: ಬೆಳಗಾವಿ ಉತ್ತರ, ದಕ್ಷಿಣ ಶಾಸಕರ ತದ್ವಿರುದ್ಧ ಹೇಳಿಕೆ..!
ಮೊದಲ ಹಂತದಲ್ಲಿ ಅಮಾನತು ಆಗಿದ್ದ ಆರು ಮಂದಿ ಮತ್ತು ಹಿಜಾಬ್ ಪ್ರತಿಭಟನೆಯಿಂದ ದೂರ ಸರಿದು ಮೊದಲಿನಿಂದಲೂ ಕಾಲೇಜಿಗೆ ಆಗಮಿಸುತ್ತಿದ್ದ 29 ಮಂದಿ ಹಾಗೂ ಕಾಲೇಜಿಗೂ ಬರದೇ, ಪ್ರತಿಭಟನೆಯಲ್ಲೂ ಪಾಲ್ಗೊಳ್ಳದೇ ಅಂತರ ಕಾಯ್ದುಕೊಂಡಿದ್ದ 11 ವಿದ್ಯಾರ್ಥಿನಿಯರು ಸೇರಿ ಒಟ್ಟು 46 ವಿದ್ಯಾರ್ಥಿನಿಯರು ಇಂದು ಸಮವಸ್ತ್ರ ಧರಿಸಿ, ತರಗತಿಗೆ ಹಾಜರಾಗಿದ್ದಾರೆ. ಇನ್ನೂ ಎರಡು ದಿನಗಳ ಹಿಂದೆ ಅಮಾನತು ಆಗಿರುವ 24 ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ ಎನ್ನಲಾಗಿದೆ.