ಮಂಗಳೂರು: ತಲೆ ಮರೆಸಿಕೊಂಡಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನ ಬಂಟ್ವಾಳದ ಪೊಲೀಸರು ಮಂಗಳೂರಿನ ಕಂಕನಾಡಿಯಲ್ಲಿ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆ, ಮಾರಿಪಳ್ಳ ನಿವಾಸಿ ಜಬ್ಬಾರ್ ಅಲಿಯಾಸ್ ಮಾರಿಪಳ್ಳ ಜಬ್ಬಾರ್ (42) ಬಂಧಿತ ಆರೋಪಿ. ಜಬ್ಬಾರ್ 2017ರ ಸಪ್ಟೆಂಬರ್ 26ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ನಡೆದ ಜಿಯಾ ಮತ್ತು ಫಯಾಝ್ ಎಂಬವರ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು.
ಈತನ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬಂಟ್ವಾಳ ವೃತ್ತ ನಿರೀಕ್ಷಕ ಹಾಗೂ ಸಿಬ್ಬಂದಿ ಇಂದು ಮಂಗಳೂರಿನ ಕಂಕನಾಡಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.