ಬಂಟ್ವಾಳ (ದಕ್ಷಿಣ ಕನ್ನಡ): ಕೊರೊನಾ ಮಿತಿ ಮೀರಿದ್ದ ವೇಳೆ ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಕರೋಪಾಡಿ ಗ್ರಾಮದಲ್ಲಿ ಆಳೆತ್ತರಕ್ಕೆ ಮಣ್ಣನ್ನು ಹಾಕಲಾಗಿತ್ತು. ಸದ್ಯ ಜಿಲ್ಲಾಡಳಿತದ ಸೂಚನೆ ಮೇರೆಗೆ ಕರೋಪಾಡಿ ಗ್ರಾಮ ಪಂಚಾಯತ್ ವತಿಯಿಂದ ರಸ್ತೆ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಲಾಗಿದೆ.
ಪ್ರಾರಂಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆದಿತ್ತು. ಮುಂಜಾಗ್ರತಾ ಕ್ರಮವಾಗಿ ರಾಜ್ಯದಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡುವಂತೆ ಆಗಿನ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಅವರು ಆದೇಶ ನೀಡಿದ್ದರು. ಅದರಂತೆ ಕರೋಪಾಡಿ ಗ್ರಾಮದ ಪೆರೋಡಿ ಕ್ರಾಸ್, ಮುಗುಳಿ, ಬೇತಾ, ಕೋಡ್ಲಾ, ಸೇರಿದಂತೆ ಆರು ಕಡೆಗಳಲ್ಲಿ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಇನ್ನೂ ಕೆಲವೆಡೆ ಬ್ಯಾರಿಕೇಡ್ ಅಳವಡಿಸಿ, ಮುಚ್ಚಲಾಗಿತ್ತು. ಸಾರಡ್ಕ ಚೆಕ್ ಪೋಸ್ಟ್ ಅನ್ನು ಬಂದ್ ಮಾಡಲಾಗಿತ್ತು. ಸದ್ಯ ಕರೋಪಾಡಿ ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಹಾಕಲಾದ ಮಣ್ಣು ತೆರವುಗೊಳಿಸಲಾಗಿದೆ.
ಕೆಲವು ತಿಂಗಳುಗಳ ಹಿಂದೆ ಕೇರಳ ಸರ್ಕಾರವು ತಮ್ಮ ಗಡಿ ಭಾಗದ ರಸ್ತೆಗಳಿಗೆ ಮಣ್ಣು ಹಾಕಿ ಬಂದ್ ಮಾಡಿತ್ತು. ಕೇರಳ ಸರ್ಕಾರ ರಸ್ತೆ ತೆರವುಗೊಳಿಸಲು ಇನ್ನೂ ಆದೇಶ ನೀಡಿಲ್ಲ. ಹೀಗಾಗಿ ಸಾರಡ್ಕ ಚೆಕ್ ಪೋಸ್ಟ್ ಇನ್ನೂ ತೆರದಿಲ್ಲ. ಈ ಬಗ್ಗೆ ಕೇರಳ ಜಿಲ್ಲಾಡಳಿತಕ್ಕೆ ಗಡಿಭಾಗದ ಜನರು ಮನವಿ ಸಲ್ಲಿಸಿದ್ದಾರೆ.