ಪುತ್ತೂರು: ಕಳೆದ 40 ವರ್ಷಗಳಿಂದ ರಸ್ತೆ ಸಂಪರ್ಕದ ಸೇತುವೆಗಾಗಿ ಮನವಿ ನೀಡಿ ಕಂಗಾಲಾದ 35ಕ್ಕೂ ಹೆಚ್ಚು ಕುಟುಂಬಗಳು ಇದೀಗ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿವೆ.
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಅಗರಿ ಎಂಬ ಭಾಗದ ದಲಿತ ಕಾಲೋನಿಯಲ್ಲಿ 12 ಕುಟುಂಬಗಳು ವಾಸವಾಗಿದ್ದು, ಈ ಭಾಗದಲ್ಲಿ ಸುಮಾರು 25 ಕ್ಕೂ ಹೆಚ್ಚು ಇತರ ಕುಟುಂಬಗಳಿವೆ. ಉಪ್ಪಿನಂಗಡಿ-ಕಡಬ ರಸ್ತೆಯನ್ನು ಪೆರಿಯಡ್ಕದ ಮೂಲಕ ಸಂಪರ್ಕಿಸುವ ಈ ಅಗರಿ ರಸ್ತೆಗೆ ಕಲ್ಲಡ್ಕ ಬಳಿಯ ಕಿರು ಹೊಳೆಗೆ ಸೇತುವೆಯೊಂದು ತೀರಾ ಅಗತ್ಯವಿದೆ. ಹಲವು ಬಾರಿ ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ. ಆದರೆ ಯಾವ ಅಧಿಕಾರಿಗಳೂ, ಜನಪ್ರತಿನಿಧಿಗಳು ಇವರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಡಿ.ವಿ. ಸದಾನಂದ ಗೌಡ ಅವರು ಪುತ್ತೂರಿನ ಶಾಸಕರಿದ್ದಾಗ ಅಗರಿ ದಲಿತ ಕಾಲೋನಿ ಸಂಪರ್ಕಿಸುವ ರಸ್ತೆಗೆ ಸೇತುವೆ ನಿರ್ಮಾಣ ಮಾಡುವಂತೆ ಇಲ್ಲಿನ ಜನತೆ ಮನವಿ ನೀಡಿದ್ದರು. ನಂತರ ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಶಾಸಕರಾದಾಗಲೂ ಮನವಿ ಸಲ್ಲಿಸಲಾಗಿತ್ತು. ಇದೀಗ ಇದೇ ಗ್ರಾಮದ ಮಣ್ಣಿನಮಗ ಸಂಜೀವ ಮಠಂದೂರು ಶಾಸಕರಾಗಿದ್ದಾರೆ. ಅವರಿಗೂ ಎರಡು ಬಾರಿ ಇಲ್ಲಿನ ಜನತೆ ಬೇಡಿಕೆಯನ್ನು ಮುಂದಿಟ್ಟಿದ್ದಅರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಯಡಿಯೂರಪ್ಪ ಅವರಿಗೂ ಇಲ್ಲಿನ ಜನತೆ ವಿಧಾನಸಭೆಯ ಮೆಟ್ಟಿಲು ಹತ್ತಿ ಸೇತುವೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ಯಾವ ಪಕ್ಷದ ಜನಪ್ರತಿನಿಧಿಗಳು ಇವರ ಕೂಗಿಗೆ ಕಿವಿಗೊಟ್ಟಿಲ್ಲವಂತೆ.
ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕಲ್ಲಡ್ಕ ಕಿರು ಹೊಳೆಯಲ್ಲಿ ಶಾಲಾ ಮಕ್ಕಳು ಹಾಗೂ ದಿನನಿತ್ಯದ ಅಗತ್ಯತೆಯಲ್ಲಿ ಹೋಗಬೇಕಾದ ಜನತೆಯ ಪರದಾಟ ಹೇಳತೀರದಂತಾಗಿದೆ. ಈ ಭಾಗದಲ್ಲಿ ಹಲವಾರು ಮಂದಿ ದನಗಳನ್ನು ಸಾಕುತ್ತಿದ್ದು, ಪೆರಿಯಡ್ಕ ಹಾಲು ಸೊಸೈಟಿಗೆ ಬರಬೇಕಾದರೆ ಸುಮಾರು 6 ಕಿ.ಮೀ. ದೂರ ಸುತ್ತಾಟ ಮಾಡಬೇಕಾಗುತ್ತದೆ. ಈ ಅಗರಿ ಭಾಗದಲ್ಲಿ ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಸ್ಯೆಯಾಗುತ್ತಿದೆ. ಇಂತಹ ಅವ್ಯವಸ್ಥೆ ತುಂಬಿರುವ ಈ ಗ್ರಾಮೀಣ ಭಾಗದ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮುಂದಾಗದಿರುವುದು ಇಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಪಂಚಾಯತ್ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ: ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಬೆನ್ನಿಗೆ ಬಿದ್ದು, ಸೇತುವೆ ಮಾಡಿಕೊಡಿ ಎಂದು ಕೂಗಿದ ಇಲ್ಲಿನ ಜನತೆ ಇದೀಗ ನಿರಾಶರಾಗಿದ್ದಾರೆ. ಹಾಗಾಗಿ ಮುಂದೆ ಬರಲಿರುವ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಲು ಸಜ್ಜಾಗಿದ್ದಾರೆ. ಆ ಮೂಲಕವಾದರೂ ತಮ್ಮ ಜೀವಿತಾವಧಿಯ ಬೇಡಿಕೆಗೆ ಬೆಂಬಲ ಸಿಗಬಹುದು ಎಂಬುದು ಇಲ್ಲಿನ ಜನತೆಯ ಆಶಾವಾದವಾಗಿದೆ.