ಉಳ್ಳಾಲ: ಸಮುದ್ರ ವಿಹಾರಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳ ಮೇಲೆ ತಂಡವೊಂದು ದಾಳಿ ಮಾಡಿ ನೈತಿಕ ಪೊಲೀಸ್ಗಿರಿ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಸಂಜೆ ವೇಳೆ ನಡೆದಿದೆ.
ಖಾಸಗಿ ಸಂಸ್ಥೆಗೆ ಸೇರಿದ ಕೇರಳ ಮೂಲದ ಆರು ಮಂದಿ ವಿದ್ಯಾರ್ಥಿಗಳು ವಿಹಾರಕ್ಕೆಂದು ಬಂದಿದ್ದರು. ಮೂವರು ವಿದ್ಯಾರ್ಥಿಗಳು ಅನ್ಯ ಸಮುದಾಯಕ್ಕೆ ಸೇರಿದವರೆಂಬುದನ್ನು ಗಮನಿಸಿ ತಂಡವೊಂದು ಇವರನ್ನು ಹಿಂಬಾಲಿಸಿತ್ತು. ಸಮುದ್ರ ತೀರದಲ್ಲಿ ವಿಹಾರ ನಡೆಸುತ್ತಿರುವ ಸಂದರ್ಭ ತಂಡ ದಾಳಿ ನಡೆಸಿದೆ. ಇದರಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗಿದ್ದ ಮೂವರು ವಿದ್ಯಾರ್ಥಿನಿಯರು ವಾಪಸ್ ಊರಿಗೆ ತೆರಳಿದ್ದಾರೆ ಎಂದು ಪೊಲೀಸರಲ್ಲಿ ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಉಳ್ಳಾಲ ಪೊಲೀಸರು ಸೋಮೇಶ್ವರ ಸಮುದ್ರ ತೀರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಸಂಜೆ 7.20ರ ಸುಮಾರಿಗೆ ಸೋಮೇಶ್ವರ ಸಮುದ್ರ ತೀರದಲ್ಲಿದ್ದ ಆರು ಮಂದಿ ಸ್ನೇಹಿತರ ಬಳಿ ಬಂದ ತಂಡವೊಂದು ಹೆಸರು, ವಿಳಾಸವನ್ನು ಕೇಳಿದೆ. ನಂತರ ಅಲ್ಲಿದ್ದ ಮೂವರು ಯುವಕರಿಗೆ ಹಲ್ಲೆಯನ್ನು ನಡೆಸಿದೆ. ಮಾಹಿತಿ ಸಿಕ್ಕ ತಕ್ಷಣ ಘಟನಾ ಸ್ಥಳಕ್ಕೆ 112 ಗಸ್ತು ವಾಹನ ತಲುಪಿದೆ. ಹಲ್ಲೆಗೊಳಗಾದ ಮೂವರು ಯುವಕರನ್ನು ಆಸ್ಪತ್ರೆಗೆ ದಾಖಲಿಸಿದೆ. ಹಲ್ಲೆಗೊಳಗಾದವರು ನೀಡಿದ ದೂರಿನ ಆಧಾರದಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ತಲೆಮರೆಸಿಕೊಂಡ ಆರೋಪಿಗಳನ್ನು ಪತ್ತೆಹಚ್ಚಲು ಎರಡು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್ಗಿರಿಗೆ ಅಂತ್ಯ ಹಾಡುತ್ತೇವೆ: ಸಿಎಂ ಸಿದ್ದರಾಮಯ್ಯ
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್ ಗಿರಿ ಇರಲ್ಲ. ನೈತಿಕ ಪೊಲೀಸ್ ಗಿರಿಗೆ ಅಂತ್ಯ ಹಾಡಲಿದ್ದೇವೆ ಎಂದು ಹೇಳಿದ್ದರು. ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದೇನೆ. ಪೊಲೀಸ್ ಇಲಾಖೆ ಜನ ಸ್ನೇಹಿಯಾಗಿ ಇರಬೇಕು. ದೂರು ಕೊಡಲು ಬಂದವರ ಜೊತೆ ಸೌಜನ್ಯಯುತವಾಗಿ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದರು.
ಅಲ್ಲದೇ, ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮಗಳು ನಡೆದಲ್ಲಿ ಅದಕ್ಕೆ ಕೇವಲ ಪೊಲೀಸ್ ಇನ್ಸ್ಪೆಕ್ಟರ್ ಮಾತ್ರ ಅಲ್ಲ, ಆ ವ್ಯಾಪ್ತಿಯ ಡಿಸಿಪಿ ಕೂಡಾ ಜವಾಬ್ದಾರಿ ಆಗುತ್ತಾರೆ. ಕಾನೂನು ಪಾಲನೆ ಮಾಡುವಾಗ ಯಾವುದೇ ಧರ್ಮ ನೋಡ ಬೇಡಿ. ಧರ್ಮಾತೀತವಾಗಿ ಕಾನೂನು ಪಾಲನೆ ಮಾಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದರು.