ಬಂಟ್ವಾಳ (ದಕ್ಷಿಣ ಕನ್ನಡ): ನವಿ ಮುಂಬೈ ಮೂಲದ ಐನೇಚರ್ ವಾಚ್ ಫೌಂಡೇಶನ್ ಎಂಬ ಸಂಸ್ಥೆ ಶಾಲಾ ಮಕ್ಕಳಿಗಾಗಿ ಆಗಸ್ಟ್ ನಲ್ಲಿ ಆಯೋಜಿಸಿದ್ದ ಕ್ಯಾಟರ್ ಪಿಲ್ಲರ್ ರೇರಿಂಗ್ ಪ್ರಾಜೆಕ್ಟ್ ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಮೂಡಂಬೈಲು ಶಾಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಯಶಸ್ವಿ ಜೀವನಚಕ್ರ ದಾಖಲಿಸುವ ಮೂಲಕ ವಿಜೇತರಾಗಿದ್ದಾರೆ.
ಕಂಬಳಿಹುಳಗಳ ವಿವಿಧ ಹಂತಗಳನ್ನು ದಾಖಲಿಸುವ ಸ್ಪರ್ಧೆ : ಮಕ್ಕಳು ತಮ್ಮ ಆಸುಪಾಸಿನಲ್ಲಿ ಕಾಣ ಸಿಗುವ ಕಂಬಳಿಹುಳವನ್ನು ಸಾಕಿ ಅದು ಚಿಟ್ಟೆ ಅಥವಾ ಪತಂಗ ಆಗುವವರೆಗೂ ಗಮನಿಸಿ ವಿವಿಧ ಹಂತಗಳನ್ನು ದಾಖಲಿಸಬೇಕು ಎಂಬ ನಿಬಂಧನೆ ಸ್ಪರ್ಧೆಗಿಡಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಸುಮಾರು ನಲ್ವತ್ತು ಶಾಲೆಗಳಿಂದ ಇನ್ನೂರೈವತ್ತು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂಡಂಬೈಲು ಶಾಲೆಯ 20 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮೂಡಂಬೈಲ್ ಶಾಲೆಯ ವಿದ್ಯಾರ್ಥಿಗಳ ಸಾಧನೆ : ಒಟ್ಟು ಸುಮಾರು 42 ಕಂಬಳಿ ಹುಳುಗಳು ವಯಸ್ಕ ಚಿಟ್ಟೆ ಅಥವಾ ಪತಂಗಗಳಾಗಿ ಪ್ರಕೃತಿಯ ಮಡಿಲು ಸೇರಿದ್ದನ್ನು ಮಕ್ಕಳು ದಾಖಲಿಸಿದ್ದರು. ಪ್ರತಿ ಹಂತವನ್ನೂ ಗಮನಿಸಿ ದಾಖಲಿಸುವ ಮೂಲಕ ಅನುಭವ ಜನ್ಯ ಕಲಿಕೆ ಯನ್ನು ಮಕ್ಕಳು ಪಡೆದದ್ದಲ್ಲದೇ, ಅತೀ ಹೆಚ್ಚು ಯಶಸ್ವಿ ಜೀವನಚಕ್ರ ದಾಖಲಿಸುವ ಮೂಲಕ ಮೂಡಂಬೈಲು ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಐನೇಚರ್ ವಾಚ್ ಫೌಂಡೇಶನ್ ಸಂಸ್ಥೆಯಿಂದ ಪ್ರಮಾಣಪತ್ರಗಳು, ಜೊತೆಗೆ ಭಾರತದ ಪತಂಗ ಮಹಿಳೆ ಎಂದು ಖ್ಯಾತರಾಗಿರುವ ಡಾ.ವಿ.ಶುಭಲಕ್ಷ್ಮಿ ಇವರು ಬರೆದಿರುವ ಫೀಲ್ಡ್ ಗೈಡ್ ಟು ಇಂಡಿಯನ್ ಮಾತ್ಸ್ ಎಂಬ ಪುಸ್ತಕ ಶಾಲೆಗೆ ಉಡುಗೊರೆಯಾಗಿ ಬಂದಿದೆ. ಮೂಡಂಬೈಲು ಶಾಲೆಗೆ ತೊಂಬತ್ತು ವರುಷದ ತುಂಬುತ್ತಿರುವ ಈ ಸುಸಂದರ್ಭದಲ್ಲಿ ಈ ಬಹುಮಾನ ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿದೆ ಎಂದು ಮುಖ್ಯೋಪಾಧ್ಯಾಯ ಅರವಿಂದ ಕುಡ್ಲ ತಿಳಿಸಿದ್ದಾರೆ.
ಇದನ್ನೂ ಓದಿ :ಬೆಳ್ತಂಗಡಿ ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಜಲವಿಹಾರ