ಮಂಗಳೂರು : ದ.ಕ.ಜಿಲ್ಲೆಯ ಸಂಸದ ನಳಿನ್ ಕುಮಾರ್ ಅವರದ್ದು ವಾಯ್ಸ್ ಇಲ್ಲದ ವೈಫಲ್ಯ. ಅವರು ಸುಮ್ಮನೆ ಭಾಷಣ ಮಾಡುವುದು ಅಷ್ಟೆ. ಆಡಳಿತದ ವಿಚಾರದಲ್ಲಿ ಬಿಜೆಪಿ ಅವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಟೀಕಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ನ ಜನಪ್ರತಿನಿಧಿಗಳು ದ.ಕ.ಜಿಲ್ಲೆಯ ಜನರ ಅಸ್ಮಿತೆಗೆ ತೊಡಕುಂಟುಮಾಡಿಲ್ಲ. ಆದರೆ ನಳಿನ್ ಕುಮಾರ್ ಕಟೀಲು ಮೂರು ಅವಧಿಗೆ ದ.ಕ.ಜಿಲ್ಲೆ ಸಂಸದರಾಗಿ ಜನರ ಅಸ್ಮಿತೆಯನ್ನು ಕೊಲೆ ಮಾಡಿದ್ದಾರೆ. ಸಂಸ್ಕೃತಿಯನ್ನು ನಾಶ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದ.ಕ.ಜಿಲ್ಲೆಯ ಅಸ್ಮಿತೆಯ ಪ್ರತೀಕವಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾರಾಟ ಮಾಡಲಾಗಿದೆ. 69 ವರ್ಷಗಳ ಹಿಂದೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ವಿಮಾನ ನಿಲ್ದಾಣವನ್ನು ಜನಸಮೂಹಕ್ಕೆ ನೀಡಿದ್ದರು. ವಾರ್ಷಿಕ ವರಮಾನಕ್ಕೂ ಯಾವುದೇ ತೊಂದರೆ ಇಲ್ಲದ ದೇಶದ ಎರಡನೇ ಅತೀ ದೊಡ್ಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಕಂಪೆನಿ ಹಾಗೂ ಜರ್ಮನಿಗೆ ಪರೋಕ್ಷವಾಗಿ ಮಾರಾಟ ಮಾಡುವ ಕೆಲಸಗಳಾಗಿದೆ ಎಂದು ಹೇಳಿದರು.
ವಿಮಾನ ನಿಲ್ದಾಣ ಖಾಸಗೀಕರಣವಾಗುವುದರಿಂದ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಯಾಣ ಮಾಡುವ ಜಿಲ್ಲೆಯ ಜನತೆಗೆ ಇದರಿಂದ ಹೊರೆಯಾಗುವ ಸಂಭವವಿದೆ. ಟಿಕೆಟ್ ದರ, ಇನ್ನಿತರ ಶುಲ್ಕಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮಹಮ್ಮದ್ ಬಡಗನ್ನೂರು ಹೇಳಿದರು.
ಮುಂದಿನ ದಿನಗಳಲ್ಲಿ ಪಣಂಬೂರು ಬಂದರನ್ನು ಮಾರಾಟ ಮಾಡುವ ಕೆಲಸಗಳು ನಡೆಯುತ್ತಿದೆ. 60 ವರ್ಷಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಹೇಳುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬ್ಯಾಂಕ್, ಬಂದರು, ವಿಮಾನ ನಿಲ್ದಾಣ ಸೇರಿದಂತೆ ಈ ಮಣ್ಣಿನ ಸಂಸ್ಕೃತಿಗಳನ್ನು ಬಿಜೆಪಿ ಸರಕಾರ ಮಾರಾಟ ಮಾಡಲು ಹೊರಟಿದೆ. ಇಷ್ಟೆಲ್ಲಾ ಇದ್ದರೂ ಮೂರು ಬಾರಿ ದ.ಕ.ಜಿಲ್ಲೆಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ಇದರ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ಅವರಿಗೆ ಈ ಜಿಲ್ಲೆಯ ಜನರ ಆಸ್ಮಿತೆಯ ಬಗ್ಗೆ ಅರಿವಿಲ್ಲ. ಆದರೆ ಈ ಖಾಸಗೀಕರಣದ ಬಗ್ಗೆ ಸಂಸತ್ತಿನಲ್ಲಿ ಏನೂ ಪ್ರಸ್ತಾಪ ಮಾಡಿಲ್ಲ. ಆದ್ದರಿಂದ ಇದನ್ನು ಕಾಂಗ್ರೆಸ್ ಖಂಡನೆ ಮಾಡುತ್ತದೆ ಎಂದು ಹೇಳಿದರು.
ನೂತನ ಮರಳು ನೀತಿಯ ಪ್ರಕಾರ 2000 ರೂ.ಗೆ ಮರಳು ನೀಡಲಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದ್ದರು. ಆದರೆ ಅವರು ಸುಮ್ಮನೆ ಹೇಳಿಕೆ ನೀಡಿ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಇದು ಅವರಿಗೆ ಶಾಪವಾಗಿ ಪರಿಣಮಿಸಲಿದೆ. ಆದ್ದರಿಂದ ಜಿಲ್ಲೆಗೆ ಸಂಸದರಿದ್ದೂ ಇಲ್ಲದಂತಾಗಿದೆ. ಜನಮಾನಸಕ್ಕೆ ಅವರು ಬೇಡವಾಗಿದ್ದಾರೆ ಎಂದು ಮಹಮ್ಮದ್ ಬಡಗನ್ನೂರು ಹೇಳಿದರು.
ಉಸ್ತುವಾರಿ ಸಚಿವರ ಮೇಲೆ ಕಿಡಿ:
ಲಾಕ್ ಡೌನ್ ಇನ್ನೂ ಒಂದು ತಿಂಗಳು ಮುಂದುವರಿಸುತ್ತೇವೆ. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ ಎಂಬ ಘೋಷಣೆಗಳಿಗೆ ದ.ಕ.ಜಿಲ್ಲೆಗೆ ಉಸ್ತುವಾರಿ ಸಚಿವರ ಅಗತ್ಯವಿಲ್ಲ. ಅವರು ಜಿಲ್ಲೆಯ ತಾಲೂಕುಗಳಲ್ಲಿ ಅಭಿವೃದ್ಧಿ ಪರ ಪರಿಶೀಲನೆ ನಡೆಸಿಲ್ಲ. ಕೊರೊನಾ ಸೋಂಕು ನಿಭಾಯಿಸುವಲ್ಲಿಯೂ ಅವರು ಎಡವಿದ್ದಾರೆ. ಕಾಣದ ಕೈಗಳು ಅವರನ್ನು ಬಾಯಿ ತೆಗೆಯಲು ಬಿಡುತ್ತಿಲ್ಲ. ಅವರನ್ನು ಕುಂಠಿತಗೊಳಿಸುತ್ತಿದೆ. ಆದ್ದರಿಂದ ಇನ್ನೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಜನರು ಅವರ ವಿರುದ್ಧ ಹೋರಾಟ ಮಾಡಲಿದ್ದಾರೆ ಎಂದರು.