ಮಂಗಳೂರು: ಕಿನ್ನಿಗೋಳಿಯಿಂದ ಮೂಡುಬಿದಿರೆ ಹಾಗೂ ಮಂಗಳೂರಿಗೆ ಸಂಚರಿಸುವ ಕೋಟ್ಯಾನ್ ಹೆಸರಿನ ಬಸ್ನಲ್ಲಿ ಇಂದು ಸಂಚರಿಸುವ ಎಲ್ಲರೂ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಮೋದಿ ಅಭಿಮಾನ.
ಹೌದು ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಈ ಹಿನ್ನೆಲೆ ಅವರ ಅಭಿಮಾನಿ ಬಳಗದಿಂದ ಇಂದು ಬೆಳಗ್ಗೆಯಿಂದಲೇ ಈ ಉಚಿತ ಸಂಚಾರ ಸೇವೆ ಆರಂಭವಾಗಿದೆ. ಈ ಬಸ್ ಕಿನ್ನಿಗೋಳಿಯಿಂದ ಮೂಡುಬಿದಿರೆಗೆ ಹೋಗಿ ಅಲ್ಲಿಂದ ಕಿನ್ನಿಗೋಳಿಗೆ ಸಂಚರಿಸಿ ಬಳಿಕ ಮಂಗಳೂರಿಗೆ ಬರಲಿದೆ. ಹೀಗೆ ದಿನಕ್ಕೆ ಎರಡು ಟ್ರಿಪ್ ಇದೇ ರೀತಿ ಈ ಬಸ್ ಸಂಚರಿಸುತ್ತದೆ. ಬಸ್ಗೆ ದಿನಕ್ಕೆ 3,500 ರೂ. ಡೀಸೆಲ್ ವೆಚ್ಚ ಬೀಳುತ್ತದೆ.
ಈ ಸಂದರ್ಭ ಮಾತನಾಡಿದ ಬಸ್ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಇಂದು ಎಲ್ಲರೂ ದೇಶಾದ್ಯಂತ ವಿವಿಧ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಾವು ಗೆಳೆಯರೆಲ್ಲಾ ಸೇರಿ ಈ ಉಚಿತ ಬಸ್ ಸೇವೆಯನ್ನು ಮಾಡಿದ್ದೇವೆ. ಇದಕ್ಕೆ ಮೋದಿಯ ಮೇಲಿನ ಅಭಿಮಾನವೇ ಕಾರಣ. ಐದು ವರ್ಷಗಳ ಹಿಂದೆ ಮೋದಿಯವರು ಪ್ರಧಾನಿಯಾದಾಗಲೂ ಇದೇ ರೀತಿ ನಾವು ಉಚಿತ ಬಸ್ ವ್ಯವಸ್ಥೆ ಮಾಡಿದ್ದೆವು. ಮುಂದೆಯೂ ಅವರೇ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾವು ಈ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಬಸ್ ನಲ್ಲಿ ಪ್ರಯಾಣಿಸಿದ ಶಬೀರ್ ಅಹಮದ್ ತೋಕೂರು ಮಾತನಾಡಿ, ನಾನು ಯಾವಾಗಲೂ ಇದೇ ಬಸ್ನಲ್ಲಿ ಪ್ರಯಾಣಿಸುವುದು. ಬಸ್ ಪೂರ್ತಿ ರಶ್ ಇತ್ತು. ಮೊದಲಿಗೆ ನನಗೆ ಇವತ್ತು ಬಸ್ ಉಚಿತ ಸೇವೆ ಎಂದು ತಿಳಿದಿರಲಿಲ್ಲ. ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆ ಇರುವುದು ಸಂತೋಷ ತಂದಿದೆ. ಬಸ್ನಲ್ಲಿದ್ದ ಎಲ್ಲರೂ ಇಂದು ಸಂತೋಷ ವಾಗಿ ಪ್ರಯಾಣಿಸಿದರು ಎಂದರು.
ಒಟ್ಟಿನಲ್ಲಿ ಈ ಬಸ್ನ ಚಾಲಕ ಶ್ರೀಕಾಂತ್ ಬಲವಿನಗುಡ್ಡೆ ಈ ವಿಶಿಷ್ಟವಾದ ಮೋದಿ ಅಭಿಮಾನವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಇತರ ಚಾಲಕರು ಹಾಗೂ ನಿರ್ವಾಹಕರು ಸಹಕಾರ ನೀಡಿದ್ದಾರೆ. 2014 ರಂದು ಮೋದಿ ಅಧಿಕಾರ ವಹಿಸಿಕೊಂಡಾಗಲೂ ಶ್ರೀಕಾಂತ್ ಬಲವಿನಗುಡ್ಡೆ ಇದೇ ರೀತಿ ಉಚಿತ ಬಸ್ ಸೇವೆ ಮಾಡಿದ್ದರಂತೆ.