ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಡಜನರ ಹಣವನ್ನು ಲೂಟಿ ಮಾಡಲು ಹೊರಟಿವೆ. ಒಂದು ರೀತಿಯಲ್ಲಿ ಪಿಕ್ ಪಾಕೆಟ್ ಮಾಡಲು ಹೊರಟಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಪಾದನೆ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪೆಟ್ರೋಲ್ ಬೆಲೆ 100 ರೂ.ಗೆ ತಲುಪಿದ್ದು, ದೇಶದ ಇತಿಹಾಸದಲ್ಲಿಯೇ ಪ್ರಥಮ. ಈ ಹಿಂದಿನ ಸರ್ಕಾರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದಾಗ ಸಬ್ಸಿಡಿಯನ್ನು ಕೊಟ್ಟು ಬೆಲೆಯನ್ನು ನಿಯಂತ್ರಣ ಮಾಡುತ್ತಿತ್ತು. ಬ್ಯಾರೆಲ್ಗೆ 140 ಡಾಲರ್ ಇದ್ದಾಗಲೂ ಪೆಟ್ರೋಲ್, ಡೀಸೆಲ್ ದರ 70 ರೂ. ದಾಟಲು ಬಿಡುತ್ತಿರಲಿಲ್ಲ ಎಂದು ಹೇಳಿದರು.
ತೈಲ ಬೆಲೆ ಏರಿಕೆ ಶ್ರೀಮಂತರಿಗೆ ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೆ ಹೊರೆಯಾಗುತ್ತದೆ. ಇದರಿಂದ ಎಲ್ಲಾ ಅವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಆದ್ದರಿಂದ ದರ ನಿಯಂತ್ರಣ ಮಾಡಬೇಕಾದರೆ ಕೇಂದ್ರ ಸರ್ಕಾರ ಮಾಡಬೇಕಾದ ಮೊದಲ ಕೆಲಸ ತೈಲ ಬೆಲೆ ಹಾಗೂ ಅಡುಗೆ ಅನಿಲ ದರವನ್ನು ಹತೋಟಿಯಲ್ಲಿಡಬೇಕು ಎಂದರು.
ಇಂದು ಕೇಂದ್ರ ಸರ್ಕಾರ ಯಾವುದೆಲ್ಲಾ ಕಠಿಣ ತೀರ್ಮಾನಗಳನ್ನು ತೆಗೆದುಕೊಂಡಿದೆಯೋ ಅದೆಲ್ಲಾ ದೇಶ ಸಂಕಷ್ಟದಲ್ಲಿದ್ದಾಗಲೇ ತೆಗೆದುಕೊಂಡಿದೆ. ಯಾವಾಗ ಜನರು ಕೊರೊನಾ ಸಂಕಷ್ಟದಲ್ಲಿ ಸಿಲುಕಿಕೊಂಡರೋ ಆಗ ಸರ್ಕಾರದಿಂದ ಬಹುದೊಡ್ಡ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಮೂಲಕ ದೇಶದ ಜನರನ್ನು ಮೋಸ ಮಾಡಲಾಗುತ್ತದೆ. ಈ ರೀತಿಯಲ್ಲಿ ದರ ಏರಿಕೆ ಬಗ್ಗೆ ಬಿಜೆಪಿ ಕಾರಣ ತಿಳಿಸಲಿ ಎಂದು ಹೇಳಿದರು.
ದೇಶದ ಸಂಪತ್ತು ಬರೀ ಎರಡು ಮಂದಿಗೆ ಮಾತ್ರ ಹಂಚಿಹೋಗಿದ್ದು, ‘we two and we are for two’ ಮೋದಿ, ಅಮಿತ್ ಶಾ ಹಾಗೂ ಅಂಬಾನಿ, ಅದಾನಿಯವರ ಸಂಪತ್ತು ವೃದ್ಧಿಯಾಗಿದೆ. 60 ರೂ. ಗೆ ಪೆಟ್ರೋಲ್ ಮಾಡುವಷ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಮಾರಾಟವಾಗುತ್ತದೆ. ಹಾಗಾಗಿ ತೈಲಬೆಲೆ ಏರಿಕೆಯನ್ನು ತಕ್ಷಣ ಇಳಿಸಲಿ ಎಂದು ಹೇಳಿದರು.