ಮಂಗಳೂರು (ದ.ಕ): ಲಾಕ್ಡೌನ್ನಿಂದ ಉದ್ಯೋಗ ಅಭದ್ರತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇವರ ನೆರವಿಗೆ ತುರ್ತಾಗಿ ಸ್ಪಂದಿಸಿ ಶೀಘ್ರದಲ್ಲೇ ಗೌರವ ಧನ ಹಾಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಮಾಸಿಕ ಕನಿಷ್ಠ ಗೌರವ ಧನ ದೊರಕುತ್ತಿದ್ದು, ಅದರ ಹೊರತು ಯಾವುದೇ ಸರಕಾರಿ ಸೌಲಭ್ಯ ಸಿಗುತ್ತಿಲ್ಲ. ಲಾಕ್ಡೌನ್ನಿಂದ ತೊಂದರೆಗೆ ಸಿಲುಕಿರುವ ಕ್ಷೌರಿಕರು, ಅಗಸರು, ಆಟೋ/ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ವಿಶೇಷ ಪ್ಯಾಕೇಜ್ನಲ್ಲಿ ಅತಿಥಿ ಉಪನ್ಯಾಸಕರನ್ನೂ ಸೇರಿಸಿ ಅವರ ಸಂಕಷ್ಟವನ್ನು ಪರಿಹರಿಸುವಂತೆ ಕ್ಯಾ.ಗಣೇಶ್ ಕಾರ್ಣಿಕ್ ಮನವಿ ಮಾಡಿದರು.