ಮಂಗಳೂರು : ನಗರದ ಬಲ್ಮಠದಲ್ಲಿ 6.15ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡಕ್ಕೆ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರಿಗೆ ಸಾಂಕೇತಿಕವಾಗಿ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು. ಬಳಿಕ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಬಿಜೆಪಿ ಸರ್ಕಾರ ಶಿಕ್ಷಣದಲ್ಲಿ ತಾರತಮ್ಯ ಮಾಡುವುದಿಲ್ಲ. ಹಿಂದಿನ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ 100 ಲ್ಯಾಪ್‌ಟಾಪ್ ಒದಗಿಸಿತ್ತು. ಯಾವುದೇ ಜಾತಿ, ಧರ್ಮ ಎಂದು ಪರಿಗಣಿಸದೆ 1 ಕೋಟಿ ರೂ. ವೆಚ್ಚದಲ್ಲಿ 235 ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ನ ನಮ್ಮ ಸರ್ಕಾರ ನೀಡಿದೆ. ಶಾದಿಭಾಗ್ಯ ಇನ್ನಿತರ ಭಾಗ್ಯವನ್ನು ನೀಡಿ ಸಮಾಜವನ್ನು ತುಂಡರಿಸುವ ಕೆಲಸ ಮಾಡುವುದಿಲ್ಲ ಎಂದರು.
ಕೊರೊನಾ ಭೀತಿಯಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಆದ್ದರಿಂದ ಆನ್‌ಲೈನ್ ಕ್ಲಾಸ್ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಈ ಲ್ಯಾಪ್ ಟಾಪ್ಗಳು ಬಹಳಷ್ಟು ಸಹಕಾರಿಯಾಗಲಿವೆ. ಅಲ್ಲದೆ ಈ ಕಾಲೇಜಿಗೆ ಇದೀಗ 6.15ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ಮಾಡಲಾಗಿದೆ. ಸುಮಾರು ಒಂದು ವರ್ಷದ ಕಾಲಾವಧಿಯಲ್ಲಿ ಈ ಕಟ್ಟಡಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಲಿವೆ ಎಂದರು. ಬಹಳಷ್ಟು ಕಾಲದಿಂದ ಈ ಪರಿಸರದಲ್ಲಿ ಸರಿಯಾದ ಬಸ್ ಸ್ಟ್ಯಾಂಡ್ ವ್ಯವಸ್ಥೆ ಇರಲಿಲ್ಲ. ಇದೀಗ ರಸ್ತೆ ಅಗಲೀಕರಣಗೊಳಿಸಿ ಸುಸಜ್ಜಿತ ಬಸ್ ಸ್ಟ್ಯಾಂಡ್‌ನ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ದಿವಾಕರ ಪಾಂಡೇಶ್ವರ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಎ ಸಿ ವಿನಯರಾಜ್, ಪೂರ್ಣಿಮಾ ಭಟ್, ಮನೋಹರ ಶೆಟ್ಟಿ, ಸುಧೀರ್ ಶೆಟ್ಟಿ, ಶಕಿಲಾ ಕಾವಾ, ಲೀಲಾವತಿ, ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಬಾಳ, ರಥಬೀದಿಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.