ಮಂಗಳೂರು : ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರಿಗೆ ಕೋವಿಡ್ ಸೋಂಕು ದೃಢಗೊಂಡ ಬಳಿಕ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸಾಗ ಹಾಕಲು ನೋಡಿರುವ ಆರೋಪದ ಮೇಲೆ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಶಾಸಕ ಯು ಟಿ ಖಾದರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಹೊರವಲಯದ ಬೆಳ್ಮ ಎಂಬಲ್ಲಿನ ತುಂಬು ಗರ್ಭಿಣಿ ಹೆರಿಗೆಗೆಂದು ನಗರದ ಎಸ್ಸಿಎಸ್ ಆಸ್ಪತ್ರೆಗೆ ಮೂರು ದಿನಗಳ ಹಿಂದೆ ದಾಖಲಾಗಿದ್ದರು. ಆದರೆ, ನಿನ್ನೆ ಆಕೆಯ ಗಂಟಲು ದ್ರವ ಮಾದರಿಯ ತಪಾಸಣಾ ವರದಿ ಬಂದಿದೆ. ಅದರಲ್ಲಿ ಆಕೆಗೆ ಸೋಂಕು ದೃಢಪಟ್ಟಿದೆ. ಆದರೆ, ಆ ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ನಡೆಸಲಾಗುತ್ತದೆ ಎಂದು ಸಿದ್ಧತೆ ನಡೆಸಿರುವ ವೈದ್ಯರು ಸವಲತ್ತುಗಳ ಕೊರತೆಯ ನೆಪವೊಡ್ಡಿ ಗರ್ಭಿಣಿಯನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಕಳುಹಿಸಲು ಫ್ಲಾನ್ ಮಾಡಿರುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಗರ್ಭಿಣಿಯ ಕುಟುಂಬಸ್ಥರು ಬೆಳ್ಮ ಕಾರ್ಪೊರೇಟರ್ ಸತ್ತಾರ್ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಶಾಸಕ ಯು ಟಿ ಖಾದರ್ಗೆ ಮಾಹಿತಿ ನೀಡಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಎಸ್ಸಿಎಸ್ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಲು ಒಪ್ಪಿಸಿದ್ದಾರೆ.