ಸುಳ್ಯ(ದಕ್ಷಿಣ ಕನ್ನಡ): ಬೆಳ್ಳಾರೆಯಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟ ಮಹಮ್ಮದ್ ಮಸೂದ್ ಅಂತ್ಯಕ್ರಿಯೆ ಬೆಳ್ಳಾರೆ ಝಕಾರಿಯಾ ಜುಮ್ಮಾ ಮಸೀದಿಯ ಖಬರ್ ಸ್ಥಾನದಲ್ಲಿ ಇಂದು ಬೆಳಗಿನ ಜಾವ 2:30ಕ್ಕೆ ನೆರವೇರಿದೆ.
"ಎಂಟು ಜನರಿದ್ದ ಗುಂಪು ಯುವಕನನ್ನು ಕರೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇವರ ಉದ್ದೇಶ ಏನಾಗಿತ್ತು?, ಪೂರ್ವಪರ ಹಿನ್ನೆಲೆ ಏನು ಎಂಬ ಬಗ್ಗೆ ತನಿಖೆ ಮಾಡಬೇಕು. ಅಲ್ಲದೇ ಜಿಲ್ಲಾಡಳಿತ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು" ಎಂದು ಈ ಸಂದರ್ಭದಲ್ಲಿ ಶಾಸಕ ಯು.ಟಿ.ಖಾದರ್ ಆಗ್ರಹಿಸಿದರು.
"ಮುಸ್ಲಿಂ ಸಮುದಾಯ ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಿದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಜಿಲ್ಲಾಡಳಿತ ಮಸೂದ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಮತ್ತು ಆಸ್ಪತ್ರೆ ಬಿಲ್ ಪಾವತಿಸುವ ಭರವಸೆ ನೀಡಿದೆ" ಎಂದು ಖಾದರ್ ಹೇಳಿದರು.
ಪ್ರಕರಣದ ಹಿನ್ನೆಲೆ: ಕ್ಷುಲ್ಲಕ ಕಾರಣಕ್ಕೆ 8 ಜನರ ತಂಡದಿಂದ ಮಸೂದ್ ಮೇಲೆ ಹಲ್ಲೆ ನಡೆದಿತ್ತು. ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಸೂದ್ ಮೃತಪಟ್ಟಿದ್ದ. ಹಲ್ಲೆ, ಕೊಲೆ ಯತ್ನ ನಡೆಸಿದ ಆರೋಪದಲ್ಲಿ ಬೆಳ್ಳಾರೆ ಪೊಲೀಸರು ಜು.20ರಂದು ಸುನಿಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್‌ರಂಜಿತ್, ಭಾಸ್ಕರ ಎಂಬವರನ್ನು ಬಂಧಿಸಿದ್ದರು. ಇದೀಗ ಬೆಳ್ಳಾರೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಕಳೆದ 2 ತಿಂಗಳುಗಳಲ್ಲಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡನೇ ಕೊಲೆ ಪ್ರಕರಣ ಇದಾಗಿದೆ. ಜೂನ್ ತಿಂಗಳ ಮೊದಲ ವಾರ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಚರಣ್‌ರಾಜ್ ರೈ ಎಂಬಾತನ ಹತ್ಯೆಯಾಗಿತ್ತು.
ಪೊಲೀಸ್ ಬಂದೋಬಸ್ತ್: ಮಧ್ಯರಾತ್ರಿ ಮೃತದೇಹ ತರುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರು ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ಸುಳ್ಯ, ಬೆಳ್ಳಾರೆ, ಕಡಬ, ಸುಬ್ರಮಣ್ಯ ಪೊಲೀಸರು ಹಾಗೂ ಹೆಚ್ಚುವರಿ ಪೊಲೀಸರ ತಂಡವನ್ನು ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಕ್ಷುಲ್ಲಕ ವಿಚಾರವಾಗಿ ಜಗಳ ಒಬ್ಬನ ಸಾವು; 8 ಜನರ ಬಂಧನ..