ಪುತ್ತೂರು : ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಗರಸಭೆಯ ವಾರ್ಡ್ಗಳಲ್ಲಿ ಮನೆ ಮನೆಯಿಂದ ತ್ಯಾಜ್ಯ ವಿಲೇವಾರಿ ಮಾಡಲು ನಗರ ಸಭೆಯ ₹81 ಲಕ್ಷ ಅನುದಾನದಲ್ಲಿ ಖರೀದಿಸಿದ 10 ವಾಹನಗಳಿಗೆ ಆಗಸ್ಟ್ 3ರಂದು ಚಾಲನೆ ನೀಡಲಾಯಿತು.
![Puttur](https://etvbharatimages.akamaized.net/etvbharat/prod-images/kn-mng-01-nagarasabe-vehicle-hasthanthara-puttur-script-kac10010_03082020165513_0308f_1596453913_708.jpg)
ಶಾಸಕ ಸಂಜೀವ ಮಠಂದೂರು ತೆಂಗಿನ ಕಾಯಿ ಒಡೆದು ನೂತನ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಪುತ್ತೂರು ನಗರ ಸಭೆಯು ಇತರ ನಗರ ಸಭೆಗಳಿಗೆ ಮಾದರಿಯಾಗಿರಬೇಕು. ಸ್ವಚ್ಛ ಪುತ್ತೂರು ಸುಂದರ ಪುತ್ತೂರು ಕಲ್ಪಣೆಗೆ ಆದ್ಯತೆ ನೀಡಿ ಸ್ವಚ್ಛಂದ ಪರಿಸರ ನಿರ್ಮಾಣಕ್ಕೆ ನಗರ ಸಭೆಯು 81 ಲಕ್ಷ ಅನುದಾನದಲ್ಲಿ 10 ವಾಹನಗಳನ್ನು ಖರೀದಿಸಿದೆ. ಎಲ್ಲಾ ವಾರ್ಡ್ಗಳಲ್ಲಿ ಮನೆ ಬಾಗಿಲಿಗೆ ತೆರಳಿ ತ್ಯಾಜ್ಯ ವಿಲೇವಾರಿ ಮಾಡಲಿದೆ ಎಂದರು.
ಅಂಗಡಿ-ಮುಗ್ಗಟ್ಟುಗಳು, ಮನೆಯವರು ಸೇರಿ ಪ್ರತಿಯೊಬ್ಬ ಸಾರ್ವಜನಿಕರು ತಮ್ಮದು ಎಂಬ ಭಾವನೆಯಿಂದ ನಗರ ಸಭೆಯೊಂದಿಗೆ ಸಹಕರಿಸಿಬೇಕು. ತ್ಯಾಜ್ಯ ವಿಲೇವಾರಿಗೆ ನಗರ ಸಭೆಯ ಯೋಜನೆಯನ್ನು ಶೇ.100ರಷ್ಟು ಸದುಪಯೋಗ ಪಡಿಸಿಕೊಳ್ಳಬೇಕು. ಸಾರ್ವಜನಿಕರು ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ ನೀಡಿದಾಗ ಶೇ.100ಸ್ವಚ್ಛ ಪುತ್ತೂರು, ಸುಂದರ ಪುತ್ತೂರು ಕಲ್ಪನೆಯು ಸಾಕಾರಗೊಳ್ಳಲಿದೆ. ತ್ಯಾಜ್ಯ ವಿಲೇವಾರಿ ಮಾಡುವ ವಾಹನವು ಸ್ವಚ್ಛವಾಗಿರಬೇಕು. ಇದಕ್ಕಾಗಿ ಚಾಲಕರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ವಾಹನವನ್ನು ತನ್ನ ಮನೆಯ ವಾಹನದಂತೆ ನಿರ್ವಹಣೆ ಮಾಡಬೇಕು. ಆಗ ನಿರಂತರವಾಗಿ ಸೇವೆ ನೀಡಲು ಸಾಧ್ಯ ಎಂದರು.
ಪೌರಾಯುಕ್ತೆ ರೂಪಾ ಶೆಟ್ಟಿ ಮಾತನಾಡಿ, ನಗರಸಭಾ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ರೂ.4.49 ಕೋಟಿಗಳಿಗೆ ಡಿಪಿಆರ್ ತಯಾರಿಸಲಾಗಿದೆ. ಇದರಲ್ಲಿ ಘನ ತ್ಯಾಜ್ಯ ವಿಲೇವಾರಿಗೆ 10 ವಾಹನ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ₹81ಲಕ್ಷ ವೆಚ್ಚದಲ್ಲಿ 10 ವಾಹನ ಖರೀದಿಸಲಾಗಿದೆ. ನಗರಸಭಾ ವ್ಯಾಪ್ತಿಯ ಪ್ರತಿ ಮನೆಗಳಿಗೆ ತೆರಳಿ ತ್ಯಾಜ್ಯ ನಿರ್ವಹಣೆ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಪೌರಾಯಕ್ತೆ ರೂಪಾ ಶೆಟ್ಟಿ, ನಗರ ಸಭಾ ಸದಸ್ಯರಾದ ಜೀವಂಧರ್ ಜೈನ್, ಪಿ ಜಿ ಜಗನ್ನಿವಾಸ ರಾವ್, ಶಿವರಾಮ ಸಪಲ್ಯ, ಗೌರಿ ಬನ್ನೂರು, ಸುಂದರ ಪೂಜಾರಿ ಬಡಾವು, ಮೋಹಿನಿ ವಿಶ್ವನಾಥ್, ಶೀನಪ್ಪ ನಾಯ್ಕ, ಇಂದಿರ ಪುರುಷೋತ್ತಮ ಆಚಾರ್ಯ, ನಗರಸಭಾ ಅಧಿಕಾರಿ ಹಾಗೂ ಸಿಬಂದಿ, ಪೌರ ಕಾರ್ಮಿಕರು ಉಪಸ್ಥಿತರಿದ್ದರು.