ಬೆಳ್ತಂಗಡಿ(ದಕ್ಷಿಣ ಕನ್ನಡ): ಲಾಕ್ಡೌನ್ ಸಂದರ್ಭದಲ್ಲಿ ತೊಂದರೆಯಲ್ಲಿರುವ ವಿವಿಧ ವರ್ಗಗಳ ಪಾಲಿಗೆ 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಿರುವ ಮುಖ್ಯಮಂತ್ರಿಗಳ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜಾ ಅಭಿನಂದನೆ ಸಲ್ಲಿಸಿದ್ದಾರೆ.
ಈ ಪ್ಯಾಕೇಜ್ ರಾಜ್ಯದಲ್ಲಿನ ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಕ್ಷೌರಿಕರು, ಮಡಿವಾಳರು, ಕಟ್ಟಡ ನಿರ್ಮಾಣ ಕಾರ್ಮಿಕರು, ಹೂವು-ತರಕಾರಿ ಬೆಳೆಗಾರರು, ನೇಕಾರರು ಹೀಗೆ ಸಮಾಜದ ವಿವಿಧ ವರ್ಗಗಳ ಶ್ರಮಿಕರ ಬದುಕಿಗೆ ಸಹಕಾರಿಯಾಗಲಿದೆ.
ಹೂ ಬೆಳೆಗಾರರಿಗೆ 1 ಹೆಕಟ್ಏರ್ಗೆ 25 ಸಾವಿರ ರೂ. ಪರಿಹಾರ, ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್, 60 ಸಾವಿರ ಮಡಿವಾಳ ಕುಟುಂಬಗಳಿಗೆ 5 ಸಾವಿರ ರೂ. ಪರಿಹಾರ. 2 ಲಕ್ಷದ 30 ಸಾವಿರ ಅಗಸ ಮತ್ತು ಕ್ಷೌರಿಕರಿಗೆ 5 ಸಾವಿರ ರೂ. ಪರಿಹಾರ, 7 ಲಕ್ಷದ 75 ಸಾವಿರ ಆಟೋ ರಿಕ್ಷಾ ಚಾಲಕರಿಗೆ 5 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿದೆ.
ಸಣ್ಣ, ಅತಿ ಸಣ್ಣ ಉದ್ಯಮಗಳ ವಿದ್ಯುತ್ ಶುಲ್ಕಗಳಲ್ಲಿ ವಿನಾಯಿತಿ, ನೇಕಾರರ ಸಾಲ ಮನ್ನಾಕ್ಕೆ 80 ಕೋಟಿ ರೂ. ಬಿಡುಗಡೆ, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಮತ್ತೆ 3,000 ರೂ. ಪರಿಹಾರ ಘೋಷಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ರಾಜ್ಯದ ಶ್ರಮಿಕ ವರ್ಗದ ಪರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಭಿನಂದನೆ ಸಲ್ಲಿಸಿದ್ದಾರೆ.