ಬೆಳ್ತಂಗಡಿ: ತಾಲೂಕಿನಲ್ಲಿ ಪಾರ್ಕ್ ನಿರ್ಮಿಸಬೇಕೆಂಬ ಅನೇಕ ವರ್ಷಗಳ ಬೇಡಿಕೆಯಿದ್ದರೂ ಸೂಕ್ತ ಸ್ಥಳಾವಕಾಶದ ಕೊರೆತೆಯಿತ್ತು. ಪ್ರಸಕ್ತ ಅರಣ್ಯ ಇಲಾಖೆಯಿಂದ ಮೀಸಲಿರಿಸಿದ ಸ್ಥಳದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಪರಿಚಯಿಸಲಾಗಿದ್ದು, ದೇಶದಲ್ಲೇ ಮಾದರಿ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಮೇಲಂತಬೆಟ್ಟು ಹಾಗೂ ಲಾಯಿಲ ಗ್ರಾಮದ ಕಲ್ಲಗುಡ್ಡೆ ಪ್ರದೇಶದಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಕೆರೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
25 ಎಕರೆ ಪ್ರದೇಶದಲ್ಲಿರುವ ವೃಕ್ಷೋದ್ಯಾನದಲ್ಲಿ ಪ್ರಾಕೃತಿಕ ವಿನ್ಯಾಸದಲ್ಲೇ ಸ್ವಲ್ಪ ಬದಲಾವಣೆ ತಂದು ಆಕರ್ಷಕವಾಗಿ ಮೂಡಿಬರುವಂತೆ ಮಾಡಬೇಕೆಂಬ ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ವೀಕ್ಷಣಾ ಗೋಪುರ, ಅಡ್ವೆಂಚರ್ ಗೇಮ್‌ಗಳು, ಕೆರೆ ನಿರ್ಮಾಣ ಕಾರ್ಯ, ವಿದ್ಯಾರ್ಥಿಗಳಿಗೆ ಪರಿಸರದಲ್ಲಿ ಗ್ರಂಥಾಲಯ, ವಾಕಿಂಗ್ ಟ್ರ್ಯಾಕ್, ಕ್ಯಾಂಟೀನ್ ಎಲ್ಲವೂ ಸೇರಿ ಬೋನ್ಸಾಯ್ ಪಾರ್ಕ್ ಮಾದರಿ ನಿರ್ಮಾಣ ಮಾಡಲಾಗುವುದು ಎಂದರು.
ಈ ವೇಳೆ ಆರ್ಕಿಟೆಕ್ಚರ್ ವಿನಯ್ ಬೆಂಗಳೂರು, ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ, ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ವೇಣೂರು ವಲಯ ಅರಣ್ಯಧಿಕಾರಿ ಹಾಗೂ ಇನ್ನಿತರರು ಇದ್ದರು.