ಬೆಳ್ತಂಗಡಿ: ಇಡೀ ವಿಶ್ವದಾದ್ಯಂತ ಭಯ ಹುಟ್ಟಿಸುತ್ತಿರುವ ಕೊರೊನಾ ವೈರೆಸ್ ಬಗ್ಗೆ ತಾಲೂಕಿನ ಜನತೆ ನಮ್ಮೊಂದಿಗೆ ಸಹಕರಿಸಬೇಕು. ಯಾವುದೇ ರೀತಿಯ ಭಯ ಪಡುವಂತಹ ಅವಶ್ಯಕತೆ ಇಲ್ಲ. ಆದಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಾರ್ವಜನಿಕರು ದೂರದ ಪ್ರಯಾಣ ಮಾಡುವುದನ್ನು ಕೆಲವು ದಿನಗಳವರೆಗೆ ಸಾಧ್ಯವಾದರೆ ಮುಂದೂಡಿ. ಅದಷ್ಟು ಸ್ವಚ್ಛತೆಯ ಬಗ್ಗೆ ಗಮನ ನೀಡಿ. ಬಿಸಿ ನೀರು ಕುಡಿಯಿರಿ ಹಾಗೂ ಮಕ್ಕಳ ಬಗ್ಗೆಯೂ ಜಾಗೃತಿ ವಹಿಸಿ. ಯಾರಲ್ಲಾದರೂ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ದಯವಿಟ್ಟು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಅದರಲ್ಲಿ ಯಾವುದೇ ಭಯ ಬೇಡ. ಅದೇ ರೀತಿ ಆರೋಗ್ಯ ಇಲಾಖೆ ನೀಡುತ್ತಿರುವ ಮಾಹಿತಿಯನ್ನು ಸರಿಯಾಗಿ ಪಾಲಿಸಿ. ನಮ್ಮ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಆರೋಗ್ಯ ಸಹಾಯಕರು ಸದಾ ನಿಮ್ಮೊಂದಿಗೆ ಇರುತ್ತಾರೆ ಎಂದರು.
ಈಗಾಗಲೇ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನ ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ, ಎಲ್ಲಾ ಖಾಸಗಿ ಆಸ್ಪತ್ರೆಗಳು ನಮ್ಮೊಂದಿಗೆ ಚಿಕಿತ್ಸೆ ನೀಡಲು ಸಿದ್ಧರಾಗಿದ್ದಾರೆ. ತುರ್ತು ಸೇವೆಗಾಗಿ ಪ್ರತ್ಯೇಕವಾದ ಖಾಸಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು ಈ ಕುರಿತಂತೆ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಮಾತನಾಡಿ, ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10 ಬೆಡ್ ಇರುವ ಐಸೋಲೇಷನ್(isolation) ವಾರ್ಡನ್ನು ಸಿದ್ಧ ಮಾಡಿಕೊಂಡಿದ್ದೇವೆ. ಈವರೆಗೆ ತಾಲೂಕಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಹೊರ ದೇಶದಿಂದ ಬಂದವರ ಮಾಹಿತಿ ಸಿಕ್ಕಿದ ಕೂಡಲೇ ಅವರ ಮನೆಗೆ ಹೋಗಿ 14 ದಿನ ಅವರ ಬಗ್ಗೆ ನಿಗಾ ವಹಿಸಿ ನಂತರ ಏನಾದರೂ ಅವರಿಗೆ ಶೀತ, ಕೆಮ್ಮು, ಜ್ವರದಂತಹ ಲಕ್ಷಣ ಕಂಡು ಬಂದಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರ ಗಂಟಲಿನ ದ್ರವವನ್ನು ಲ್ಯಾಬ್ಗೆ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು.
ಜೊತೆಗೆ ತುರ್ತು ಅವಶ್ಯಕತೆಗಾಗಿ ಧರ್ಮಸ್ಥಳದಲ್ಲಿ 10 ಬೆಡ್ನ ವಾರ್ಡ್ ಸಿದ್ಧ ಮಾಡಿ ಇಟ್ಟುಕೊಂಡಿದ್ದೇವೆ. ತಾಲೂಕಿನ ಜನತೆ ನಮ್ಮೊಂದಿಗೆ ಸಹಕರಿಸಬೇಕು. ಯಾವುದೇ ಗೊಂದಲ ಬೇಡ ಎಂದರು.