ಬೆಳ್ತಂಗಡಿ: ಕೋವಿಡ್-19 ವೈರಸ್ ಹರಡದಂತೆ ತಡೆಯಲು ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಶಾಸಕ ಹರೀಶ್ ಪೂಂಜ ದಿನಸಿ ಪದಾರ್ಥಗಳ ಕಿಟ್ ವಿತರಿಸುವ ಮೂಲಕ ನೆರವಾಗಿದ್ದಾರೆ.
ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 250 ಬಡ ಕುಟುಂಬಗಳಿಗೆ ಗ್ರಾ.ಪಂ. ಪ್ರತಿನಿಧಿಗಳು, ಪೆಟ್ರೋನೆಟ್ ಕಂಪನಿ, ಎಚ್ಪಿಸಿಎಲ್, ಐಪಿಸಿಎಲ್ ಕಂಪನಿಗಳು ಹಾಗೂ ದಾನಿಗಳ ಸಹಕಾರದಿಂದ ಆಹಾರ ಸಾಮಗ್ರಿಗಳ ಕಿಟ್ಗಳನ್ನು ಶಾಸಕ ಹರೀಶ್ ಪೂಂಜ ವಿತರಿಸಿದರು.
ಇದೇ ವೇಳೆಯಲ್ಲಿ ನೆರಿಯ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗ್ರಾ.ಪಂ. ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೂ ಆಹಾರ ಸಾಮಗ್ರಿಗಳ ಕಿಟ್ಗಳನ್ನು ಶಾಸಕರು ವಿತರಿಸಿದರು. ಈ ಸಂದರ್ಭದಲ್ಲಿ ಪೆಟ್ರೋನೆಟ್ ಮ್ಯಾನೇಜರ್ ಪ್ರವೀಣ್ ಕುಮಾರ್, ಗ್ರಾ.ಪಂ. ಅಧ್ಯಕ್ಷ ಪಿ.ಮಹಮ್ಮದ್, ಪೆಟ್ರೋನೆಟ್ ಎಂಜಿನಿಯರ್ ಕಿರಣ್ ಕುಮಾರ್, ಶೀತಲ್ ಕುಮಾರ್, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.