ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಸೋಮವಾರ ಆರಂಭವಾಗಿದ್ದು, ಮೊದಲ ದಿನವೇ ಪರೀಕ್ಷೆ ನಡೆಸುವಲ್ಲಿ ವಿಶ್ವವಿದ್ಯಾಲಯ ಎಡವಟ್ಟು ಮಾಡಿಕೊಂಡಿದೆ. ಮೊದಲ ದಿನ ನಡೆದ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಕನ್ನಡ ಪರೀಕ್ಷೆಗೆ ಹಳೆಯ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಗಮನಕ್ಕೆ ಬಂದ ತಕ್ಷಣ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ.
ಪರೀಕ್ಷೆ ಆರಂಭವಾಗಿ ಅರ್ಧ ಗಂಟೆಯೊಳಗೆ ರದ್ದು ಮಾಡಲಾಗಿದೆ. ಪರಿಷ್ಕೃತ ದಿನಾಂಕವನ್ನು ಶೀಘ್ರ ತಿಳಿಸುವುದಾಗಿ ವಿಶ್ವವಿದ್ಯಾಲಯ ಕಾಲೇಜುಗಳಿಗೆ ತಿಳಿಸಿದೆ. ಮಂಗಳೂರು ವಿವಿ ವ್ಯಾಪ್ತಿಯ 34 ಕಾಲೇಜುಗಳಲ್ಲಿ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಪರೀಕ್ಷೆ ಸೋಮವಾರ ಆರಂಭವಾಗಿತ್ತು. ಬಿಬಿಎ ವಿದ್ಯಾರ್ಥಿಗಳಿಗೆ ಮೊದಲ ದಿನ ಕನ್ನಡ ಪರೀಕ್ಷೆ ನಿಗದಿಯಾಗಿತ್ತು. ವಿದ್ಯಾರ್ಥಿಗಳಿಗೆ ನೀಡಿದ ಪ್ರಶ್ನೆಪತ್ರಿಕೆಯ ಮೇಲ್ಭಾಗದಲ್ಲಿ 'ದ್ವಿತೀಯ ಸೆಮಿಸ್ಟರ್' ಎಂದು ಬರೆಯಲಾಗಿತ್ತು. ಆದರೆ ಅಲ್ಲಿ ಮುದ್ರಣವಾಗಿರುವ ಪ್ರಶ್ನೆಗಳು ಹಿಂದಿನ ಸೆಮಿಸ್ಟರ್‌ನದಾಗಿದ್ದವು.
ಈ ವಿಚಾರವನ್ನು ಪರೀಕ್ಷಾ ಕೇಂದ್ರಗಳು ತತ್‌ಕ್ಷಣವೇ ವಿಶ್ವವಿದ್ಯಾಲಯದ ಗಮನಕ್ಕೆ ವಿಷಯವನ್ನು ತಂದವು. ತಕ್ಷಣ ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ ಪಿ ಎಲ್ ಧರ್ಮ ಅವರು ಪರೀಕ್ಷೆಯನ್ನು ರದ್ದುಗೊಳಿಸಿದರು. ಹೊಸ ಪ್ರಶ್ನೆ ಪತ್ರಿಕೆಯೊಂದಿಗೆ ಶೀಘ್ರ ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿದೆ.
ಪ್ರಶ್ನೆಪತ್ರಿಕೆ ಎಡವಟ್ಟು ಸಂಬಂಧ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಕಾಲೇಜುಗಳಿಗೆ ಪೂರೈಸುವ ಹೊಣೆ ಹೊತ್ತ ಸಂಬಂಧಪಟ್ಟ ಪರೀಕ್ಷಾ ವಿಭಾಗದ ಮುಖ್ಯಸ್ಥರಿಗೆ ಮಂಗಳೂರು ವಿಶ್ವವಿದ್ಯಾಲಯ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಮಂಗಳೂರು ವಿವಿ ವೆಬ್‌ಸೈಟ್‌ನಲ್ಲಿ ದೋಷ; ಸೆಮಿಸ್ಟರ್ ಫಲಿತಾಂಶ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ನಿರಾಸೆ