ಮಂಗಳೂರು: ಮಂಗಳೂರಿನಲ್ಲಿ ಕೊರಗಜ್ಜ ದೈವಸ್ಥಾನ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ದೈವದೆದುರು ಬಂದು ಕ್ಷಮೆಯಾಚಿಸಿದ ಘಟನೆ ನಡೆದಿದ್ದು, ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ದೈವಗಳ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್, ಅವಹೇಳನಕಾರಿ ಪತ್ರ; ಆರೋಪಿಗಳ ಪತ್ತೆಗೆ ಆಗ್ರಹ
ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮಂಗಳೂರಿನ ವಿವಿಧ ಕೊರಗಜ್ಜನ ದೈವಸ್ಥಾನವನ್ನು ಅಪವಿತ್ರಗೊಳಿಸಿ, ಅವಾಚ್ಯ ಪದಗಳ ಪತ್ರವನ್ನು ಕಾಣಿಕೆ ಡಬ್ಬಿಗೆ ಹಾಕಿ ಅಪಮಾನ ಮಾಡಲಾಗಿತ್ತು. ಈ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ಈ ಘಟನೆಯ ಸಂದರ್ಭದಲ್ಲಿ ಕೊರಗಜ್ಜ ದೈವದ ಮುಂದೆ ಭಕ್ತರು ಅವಹೇಳನ ಮಾಡಿದವರಿಗೆ ಶಿಕ್ಷಿಸುವಂತೆ ಪ್ರಾರ್ಥಿಸಿದ್ದರು.
ದೈವದ ಕಾರ್ಣಿಕ!
ನಿನ್ನೆ ರಾತ್ರಿ ಎಮ್ಮೆಕೆರೆಯಲ್ಲಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಜಾತ್ರೆ ನಡೆದಿದ್ದು, ಅಲ್ಲಿಂದ ಬಂದ ವ್ಯಕ್ತಿಯೋರ್ವ ಘಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಮಾಡಿದ್ದಾನೆ. ಅಂದು ತನ್ನನ್ನು ಗೆಳೆಯನೊಬ್ಬ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ನಾನು ಹೊರಗೆಡೆಯೇ ಇದ್ದೆ. ಆದರೆ, ಆತ ಇತ್ತೀಚೆಗೆ ಹುಚ್ಚು ಹಿಡಿದಂತೆ ವರ್ತಿಸಿ ಗೋಡೆಗೆ ತಲೆ ಚಚ್ಚಿಕೊಂಡು ಮೃತಪಟ್ಟ ಸುದ್ದಿ ತಿಳಿದಿದೆ. ಇದೀಗ ನನ್ನ ಆರೋಗ್ಯವೂ ಸಹ ಕೆಡುತ್ತಿದ್ದು, ಕ್ಷಮೆ ನೀಡುವಂತೆ ಪ್ರಾರ್ಥಿಸಿದ್ದೇನೆ ಎಂದು ಸೇರಿದ್ದ ಜನರ ಮುಂದೆ ಅಂದು ನಡೆದ ಘಟನಾವಳಿ ಬಿಚ್ಚಿಟ್ಟಿದ್ದಾನೆ.
ಇದನ್ನೂ ಓದಿ: ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ಪ್ರಕರಣ.. ಸ್ಥಳಕ್ಕೆ ಕಮಿಷನರ್ ಭೇಟಿ, ಪರಿಶೀಲನೆ..
ವಿಕೃತಿ ಮೆರೆದಿದ್ದ ವ್ಯಕ್ತಿಯ ಹೇಳಿಕೆಗೆ ಅಲ್ಲಿ ಸೇರಿದ್ದ ಜನರು ಆತನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿ ಕ್ಷಮೆಯಾಚನೆ ಅಷ್ಟೇ ಮಾಡಿದ್ದು, ದೈವಸ್ಥಾನ ಅಪವಿತ್ರ ಮಾಡಿದ್ದು ಯಾರು ಎಂದು ಮಾಹಿತಿ ನೀಡಿಲ್ಲ.