ಮಂಗಳೂರು: ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಪೂಜಾ ವಿಚಾರಗಳ ಬಗ್ಗೆ ಭಕ್ತರಿಗೆ ತಪ್ಪು ಮಾಹಿತಿ ನೀಡುತ್ತಿರುವ ಯೂಟ್ಯೂಬ್ ಚಾನೆಲ್ ವಿರುದ್ಧ ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್ ರವೀಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ.
'ರಜಿನಿ ಅಪ್ಡೇಟ್ಸ್' ಎಂಬ ಹೆಸರಿನ ಯೂಟ್ಯೂಬ್ ಚಾನೆಲ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರು ಬಳಸಿ ಭಕ್ತಾದಿಗಳಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುತ್ತಿದ್ದು, ಭಕ್ತಾದಿಗಳನ್ನು ವಂಚಿಸುತ್ತಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ.
ಯೂಟ್ಯೂಬ್ ಚಾನೆಲ್ ವಿಡಿಯೋದಲ್ಲಿ ಶ್ರೀಕಾಂತ್ ಭಟ್ ಎಂಬುವವರು ತಾನು ದೇವಸ್ಥಾನದ ಅರ್ಚಕ ಎಂದು ಪರಿಚಯಿಸಿ ದೇವಳದ ಬಗ್ಗೆ ಭಕ್ತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ನಲ್ಲಿ ಸರ್ಪದೋಷ, ನಾಗದೋಷಕ್ಕೆ ಸಂಬಂಧಿಸಿದ ಪೂಜೆಯ ಬಗ್ಗೆ ಮಾಹಿತಿ ನೀಡಿ ತಮ್ಮ ಮೊಬೈಲ್ ನಂಬರ್ ಕೊಟ್ಟು ಭಕ್ತಾದಿಗಳನ್ನು ವಂಚಿಸುತ್ತಿದ್ದಾರೆ. ಸರ್ಕಾರಿ ಆಡಳಿತದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯವನ್ನು ಕೊಳ್ಳೆ ಹೊಡೆಯಲು ಮುಂದಾಗಿದ್ದು,ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದೆ.