ಉಳ್ಳಾಲ: ಕ್ಯಾನ್ಸರ್ ಎನ್ನುವುದು ದೊಡ್ಡ ಪ್ರಮಾಣದಲ್ಲಿ ಜನರಲ್ಲಿ ಆವರಿಸುತ್ತಿರುವ ಮಾರಕ ಕಾಯಿಲೆ. ಇದನ್ನು ಸೂಕ್ತ ಸಮಯದಲ್ಲಿ ಪತ್ತೆ ಹಚ್ಚುವ ಕಾರ್ಯವಾಗಬೇಕು. ಆ ಮೂಲಕ ಚಿಕಿತ್ಸೆ ನೀಡುವುದರಿಂದ ರೋಗ ಗುಣಮುಖವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಟಾಟಾ ಟ್ರಸ್ಟ್ ಸಹಯೋಗದಿಂದ ದೇಶದಲ್ಲೇ ಬೆಂಗಳೂರು-ಮುಂಬೈ ಹೊರತುಪಡಿಸಿ ಇದೀಗ ಜಿಲ್ಲೆಯ ದೇರಳಕಟ್ಟೆಯ ಯೆನೆಪೋಯದಲ್ಲಿ ಅತ್ಯಾಧುನಿಕ ಉಪಕರಣಗಳ ಜೊತೆಗೆ ನೂತನ ಚಿಕಿತ್ಸಾ ವಿಧಾನ ಆರಂಭಗೊಂಡಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯ ಹಾಗೂ ಟಾಟಾ ಟ್ರಸ್ಟ್ ಸಹಯೋಗದಲ್ಲಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡ ಝುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಟಾಟಾ ಟ್ರಸ್ಟ್ ಕ್ಯಾನ್ಸರ್ ಫ್ರೀ ಅಭಿಯಾನದಂಗವಾಗಿ ಅಂಕೋಲಜಿ ಘಟಕವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪನೆ ಮಾಡುವ ಮೂಲಕ ಜಿಲ್ಲೆಯ ಅರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಇದಕ್ಕಾಗಿ ಟಾಟಾ ಟ್ರಸ್ಟ್ ಅನ್ನು ಅಭಿನಂದಿಸುತ್ತೇನೆ. ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯ ಚೆನ್ನಾಗಿದೆ. ಬೆಂಗಳೂರು ಹೊರತುಪಡಿಸಿ ಯೆನೆಪೋಯದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಲು ಆಧುನಿಕ ತಂತ್ರಜ್ಞಾನ ಅಳವಡಿಸಿರುವುದು ಹೆಮ್ಮೆಯ ವಿಚಾರ.
ಇದನ್ನೂ ಓದಿ: ಕೈಗಾರಿಕೆ ಸ್ಥಾಪನೆಗೆ ಭೂಸ್ವಾಧೀನ: ಆತಂಕದಲ್ಲಿ ಕರಾವಳಿಯ ಮೂರು ಗ್ರಾಮಗಳ ಜನತೆ
ಈಗ ಪ್ರಾರಂಭವಾಗಿರುವ ಅಂಕೋಲಜಿ ಘಟಕವನ್ನು ಎಲ್ಲ ಜಿಲ್ಲೆಗಳ ಜನರು ಬಳಸಿಕೊಳ್ಳಲಿ. ದ.ಕ ಜಿಲ್ಲೆ ಉಳಿದ ಜಿಲ್ಲೆಗಳಿಗಿಂತ ಸರ್ಕಾರ, ಖಾಸಗಿ ಸಂಸ್ಥೆಗಳ ಮೂಲಕ ಪ್ರಗತಿಯನ್ನು ಸಾಧಿಸಿದೆ. ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಮೂಲಕ ಉಳಿದ ಜಿಲ್ಲೆಯವರಿಗೆ ಸಹಕಾರಿಯಾಗಿದೆ. ಶಿಕ್ಷಣ ಸಂಸ್ಥೆಗಳು, ಗುಣಮಟ್ಟದ ಆಸ್ಪತ್ರೆಗಳು ಇರುವ ಜಿಲ್ಲೆಗೆ ಹೊರರಾಜ್ಯ ಹಾಗೂ ಹೊರಜಿಲ್ಲೆಯವರು ಹೆಚ್ಚಾಗಿ ಬರುತ್ತಾರೆ ಎಂದರು.