ಸುಬ್ರಹ್ಮಣ್ಯ: ಹಿಜಾಬ್ ಬಗ್ಗೆ ಎದ್ದಿರುವ ವಿವಾದ ಬೇಸರ ತಂದಿದೆ. ಜಗತ್ತಿನಲ್ಲಿಯೇ ವಿವಿಧತೆಯಲ್ಲಿ ಏಕತೆಯನ್ನು ತಂದಂತಹ ದೇಶ ನಮ್ಮದು. ಎಲ್ಲರೂ ಒಂದೇ ಎಂಬಂತೆ ಜೀವಿಸುತ್ತಿದ್ದೇವೆ. ಶಾಲಾ ಕಾಲೇಜಿನಲ್ಲಿ ಸಮವಸ್ತ್ರ ಎಂಬುದು ಪ್ರಮುಖವಾದದ್ದು. ಅವರಲ್ಲಿ ಬೇರಾವುದೇ ಭಾವನೆಗಳು ಬರಬಾರದು. ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಮಂಗಳವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಕ್ಕಳಲ್ಲಿ ಇಂತಹ ಭಾವನೆ ಬರಬಾರದು. ಅವರು ಬಿಳಿ ಹಾಳೆ ಇದ್ದಂತೆ. ನಾವು ಏನು ಹೇಳುತ್ತೇವೆಯೋ ಅದರಂತೆ ಅವರು ನಡೆಯುವುದರಿಂದ ನಾಳೆ ಭಾರತ, ಕರ್ನಾಟಕದ ಭವಿಷ್ಯ ಏನು? ಎಂಬ ಬಗ್ಗೆ ಎಲ್ಲರೂ ಚಿಂತಿಸಬೇಕಿದೆ ಎಂದರು.
ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಅದು ನಡೆಯಲೇಬಾರದು. ಸದ್ಯ ಪ್ರಕರಣ ಹೈಕೋರ್ಟ್ನಲ್ಲಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ. ಕೋರ್ಟ್ ತೀರ್ಪು ಅಂತಿಮವಾಗಲಿದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಿದೆ ಎಂದರು.
ಇದನ್ನೂ ಓದಿ: 'ಉಡುಪಿ ಕಾಲೇಜಿನಲ್ಲಿ ಹಿಂದಿನಿಂದಲೂ ಹಿಜಾಬ್ಗೆ ಅವಕಾಶವಿರಲಿಲ್ಲ': ಸಾಕ್ಷ್ಯ ನೀಡಿದ ಕಾಲೇಜು ಆಡಳಿತ ಮಂಡಳಿ
ಗರ್ಭ ಸಂಸ್ಕಾರ ಯೋಜನೆ ಜಾರಿ: ಹೊರಗಡೆ ಏನು ಸಂಸ್ಕಾರ ಇರುತದೋ ಅದು ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಗರ್ಭಿಣಿಯರಿಗೆ 'ಗರ್ಭ ಸಂಸ್ಕಾರ' ಯೋಜನೆ ಜಾರಿ ಮಾಡಲಾಗಿದೆ. ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಗರ್ಭಿಣಿಯರನ್ನು ಕರೆಯಿಸಿ ಅವರಿಗೆ ವಿಶೇಷ ಪೂಜೆ ಮಾಡಿಸಲಾಗುವುದು. ಇದು ಮಗುವಿಗೆ ಅಭಿಮನ್ಯುವಿನ ತರಹ ಸಂಸ್ಕಾರ ಕಲಿಸಲು ಸಹಾಯ ಮಾಡಬಹುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
'ಮಾಸ್ಟರ್ ಪ್ಲಾನ್' ಕಾಮಗಾರಿ ಶೀಘ್ರ ಅನುಷ್ಠಾನ: ಕುಕ್ಕೆ ಸುಬ್ರಮಣ್ಯದಲ್ಲಿ ಈಗಾಗಲೇ ಬಿಡುಗಡೆ ಆಗಿರುವ 300 ಕೋಟಿ ವೆಚ್ಚದ 'ಮಾಸ್ಟರ್ ಪ್ಲಾನ್' ಕಾಮಗಾರಿಗೆ ಆದಷ್ಟು ಬೇಗ ಟೆಂಡರ್ ಕರೆದು ಅನುಷ್ಠಾನಗೊಳಿಸುಲು ಪ್ರಯತ್ನಿಸಲಾಗುವುದು. ಈಗಾಗಲೇ ಆರಂಭಿಸಿರುವ ಕಾಮಗಾರಿ ವಿಳಂಬದ ಬಗ್ಗೆ ವರದಿ ಕೇಳಲಾಗಿದೆ. ಅದನ್ನು ಕೂಡಲೇ ಪೂರ್ಣಗೊಳಿಸಲಾಗುವುದು ಎಂದು ಸಚಿವೆ ಭರವಸೆ ನೀಡಿದರು.
ಈ ವೇಳೆ ಸಚಿವ ಎಸ್.ಅಂಗಾರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.