ಸುಳ್ಯ(ದಕ್ಷಿಣ ಕನ್ನಡ) : ರಾಜಕೀಯ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುತ್ತಿದ್ದೇನೆ. ಮತ್ತೆ ರಾಜಕೀಯದಲ್ಲಿ ಸಕ್ರಿಯವಾಗಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಮತಪ್ರಚಾರಕ್ಕೂ ಹೋಗುತ್ತೇನೆ ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅಂಗಾರ, ರಾಜಕೀಯ ನಿವೃತ್ತಿ ಘೋಷಣೆ ಹಿಂಪಡೆದರು.
ಬಿಜೆಪಿ ಅಭ್ಯರ್ಥಿ ಘೋಷಣೆ ವೇಳೆ ಅಭ್ಯರ್ಥಿ ಸ್ಥಾನ ಸಿಗದ ನೋವಿನಿಂದ ಅಂದು ರಾಜಕೀಯ ನಿವೃತ್ತಿ ಹೇಳಿಕೆ ನೀಡಿದ್ದೇನೆ. ಆದರೆ ಬಳಿಕ ನನ್ನ ನಿರ್ಧಾರ ಬದಲಾಯಿಸಿದ್ದೇನೆ. ಮಾತ್ರವಲ್ಲ, ಬಿಜೆಪಿ ಪಕ್ಷದಲ್ಲಿದ್ದುಕೊಂಡೇ ಈಗಾಗಲೇ ಪಕ್ಷ ಘೋಷಣೆ ಮಾಡಿರುವ ಅಭ್ಯರ್ಥಿಯ ಗೆಲುವಿಗಾಗಿ ಪೂರಕ ಕೆಲಸ ಮಾಡುತ್ತೇನೆ ಎಂದರು.
ಈ ಹಿಂದೆ ಏಳು ಬಾರಿಯೂ ಸ್ಪರ್ಧೆ ಮಾಡಿದಾಗಲೂ ನಾನೆಂದೂ ನನಗೆ ಟಿಕೆಟ್ ಕೊಡಿ ಎಂದು ಕೇಳಿಕೊಂಡಿಲ್ಲ. ಟಿಕೆಟ್‌ಗಾಗಿ ಲಾಬಿ ಮಾಡಿದವನೂ ಅಲ್ಲ. ಇಷ್ಟು ಬಾರಿಯೂ ಪಕ್ಷವೇ ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು. ನನ್ನ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡಿದವನಲ್ಲ. ಹೀಗಾಗಿ ಈ ಬಾರಿಯೂ ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಎಂಬ ಹೇಳಿಕೆ ಕೊಟ್ಟಿದ್ದೆ ಎಂದು ಹೇಳಿದರು.
ಇದನ್ನೂ ಓದಿ : ಪಕ್ಷದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ: ಸುಳ್ಯದಲ್ಲಿ ಅಭ್ಯರ್ಥಿ ಬದಲಾವಣೆ ಪ್ರಶ್ನೆಗೆ ಸಚಿವ ಎಸ್. ಅಂಗಾರ ಉತ್ತರ
ಏಪ್ರಿಲ್ 11ರ ರಾತ್ರಿ ಟಿವಿ ನೋಡಿದಾಗಲೇ ನನಗೆ ಸ್ಪರ್ಧೆಗೆ ಅವಕಾಶವಿಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಇದರಿಂದ ನನ್ನ ಮನಸ್ಸಿಗೆ ತೀವ್ರ ಆಘಾತವಾಯಿತು. ಯಾರಲ್ಲಿ ಏನು ಹೇಳಬೇಕೆಂದೂ ತಿಳಿಯಲಿಲ್ಲ. ಹೀಗಾಗಿ ಏಪ್ರಿಲ್ 12ರಂದು ಬೆಳಗ್ಗೆ ನಾನು ಗೊಂದಲದಿಂದ ನನ್ನ ನಿರ್ಧಾರ ಪ್ರಕಟಿಸಿದೆ ಎಂದರು.
ಇದನ್ನೂ ಓದಿ : ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ: ರಾಜಕೀಯ ನಿವೃತ್ತಿ ಪಡೆದ ಎಸ್ ಅಂಗಾರ..