ಮಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿರುವುದರಿಂದ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಅವರಿಗೆ ಡ್ಯಾಮೇಜ್ ಆಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಹರಿಪ್ರಸಾದ್ ಅವರು ಯಾರ ಬಗ್ಗೆ ಟೀಕೆ ಮಾಡ್ತಾರೆ, ಯಾಕೆ ಮಾಡ್ತಾರೆ ಅರ್ಥವಾಗ್ತಿಲ್ಲ. ಅವರು ಟೀಕೆ ಮಾಡಿದ ವೇದಿಕೆಯಲ್ಲಿ ಎಲ್ಲ ಪಕ್ಷದ ಮುಖಂಡರುಗಳಿದ್ದರು. ಈಗಾಗಲೇ ಹೈಕಮಾಂಡ್ ಅವರಿಗೆ ಏನೂ ಮಾತನಾಡಬೇಡಿ ಎಂದು ಹೇಳಿದೆ. ಆದರೆ ಅವರು ಒಬ್ಬ ರಾಜಕಾರಣಿಯಾಗಿ ಆ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಅಸಮಾಧಾನ ಯಾಕೆ ಗೊತ್ತಿಲ್ಲ. ಪಕ್ಷದಲ್ಲಿ ಸ್ಥಾನ ದೊರಕುತ್ತದೆ, ಹೋಗುತ್ತದೆ. ಆದರೆ ಪ್ರಬುದ್ಧ ರಾಜಕಾರಣಿಯಾಗಿ ಒಂದು ಸಾರ್ವಜನಿಕ ವೇದಿಕೆಯಲ್ಲಿ ಆ ರೀತಿ ಮಾತನಾಡಬಾರದು. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಅವರಿಗೇ ಡ್ಯಾಮೇಜ್ ಆಗುತ್ತದೆ. ನಮ್ಮ ಪಕ್ಷ ಬೇಧಬಾವ ಮಾಡಿಲ್ಲ, ಅಂಥದ್ದೂ ಮಾಡಿಯೂ ಇಲ್ಲ ಎಂದು ದಿನೇಶ್ ಗುಂಡೂರಾವ್.
ಮಂಗಳೂರು ವಿಶ್ವವಿದ್ಯಾಲಯಯದಲ್ಲಿ ಗಣೇಶೋತ್ಸವ ವಿವಾದದ ವಿಚಾರದಲ್ಲಿ ಮಾತನಾಡಿದ ಸಚಿವರು, ಮಂಗಳೂರು ವಿವಿ ಬಿ ದರ್ಜೆಗೆ ಇಳಿದಿದ್ದು, ಅದನ್ನು ಹೇಗೆ ಎ ದರ್ಜೆಗೆ ಏರಿಸುವುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕು. ಗಣೇಶೋತ್ಸವ ನಡೆಸುವ ವಿಚಾರದಲ್ಲಿ ವಿವಿ ಮಟ್ಟದಲ್ಲಿ, ಕುಲಪತಿಗಳು ತೀರ್ಮಾನ ಮಾಡುತ್ತಾರೆ. ಹೊರಗಿನವರು ಅದರಲ್ಲಿ ಹಸ್ತಕ್ಷೇಪ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡುತ್ತೇನೆ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡುತ್ತಾರೆ, ಇನ್ನೊಬ್ಬ ಏನು ಮಾಡುತ್ತಾರೆ ಎಂಬುದು ನಮಗೇನು ಸಂಬಂಧ. ಮಂಗಳೂರು ವಿವಿ ಪರಿಣಾಮಕಾರಿಯಾಗಿ, ಶೈಕ್ಷಣಿಕವಾಗಿ ಬೆಳೆಯಬೇಕು. ಅದರ ಬಗ್ಗೆ ಮಾತ್ರ ಚರ್ಚೆ ಮಾಡಿದರೆ ಉತ್ತಮ ಎಂದು ಹೇಳಿದರು.
ವಿಶ್ವವಿದ್ಯಾಲಯದ ಹಣ ಸಾರ್ವಜನಿಕರ ಹಣ. ಅದು ಶಿಕ್ಷಣಕ್ಕೆ ಬಳಕೆಯಾಗಬೇಕು. ಸಂಬಳ ಸರಿ ಕೊಡುತ್ತಿಲ್ಲ, ಪಿಂಚಣಿ ಸರಿಯಾಗಿ ಕೊಡುತ್ತಿಲ್ಲ. ಅನೇಕ ತೊಂದರೆಗಳು ಇವೆ. ಅದನ್ನು ಸರಿಪಡಿಸಲು ಒತ್ತು ನೀಡಲಿ. ಹಬ್ಬ ಯಾವರೀತಿ ಆಚರಣೆ ಮಾಡಬೇಕೆಂಬುದು ವಿಶ್ವವಿದ್ಯಾಲಯಕ್ಕೆ ಬಿಟ್ಟಿದ್ದು. ಇದರ ಬಗ್ಗೆ ಗೊಂದಲ ಸೃಷ್ಟಿ ಮಾಡೋದು ಬೇಡ. ಚುನಾವಣೆ ಹತ್ತಿರ ಬರುತ್ತಿದೆ ಎಂದು ಅಶಾಂತಿಯನ್ನು ಸೃಷ್ಟಿ ಮಾಡುವುದು ಬೇಡ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಈಗಾಗಲೇ ನೂರು ದಿನಗಳನ್ನು ಪೂರೈಸಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎನ್ನುವುದಕ್ಕೆ ಸರ್ಕಾರದ ಸಚಿವನಾಗಿ ನಾನು ಹೆಮ್ಮೆ ಪಡುತ್ತೇನೆ. ಜನರಿಗೆ ಕೊಟ್ಟಿರುವ ಭರವಸೆಗಳನ್ನ ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರದಲ್ಲಿ ಮಾಡುತ್ತಿದ್ದೇವೆ. ವಿಶೇಷವಾಗಿ ಕರಾವಳಿ ಭಾಗದ ಜನತೆಗೆ ನಾವು ಕೊಟ್ಟ ಭರವಸೆಗಳನ್ನು ಒಂದೊಂದಾಗಿ ಈಡೇರಿಸುವತ್ತ ಸಾಗಿದ್ದೇವೆ. ಮೀನುಗಾರರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಪ್ರಮುಖ ನಿರ್ಧಾರಗಳನ್ನ ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಇಂಜಿನ್ಗಳಾಗಿ ಬದಲಾಯಿಸಲು ಸಹಾಯಧನ: ಸೀಮೆಎಣ್ಣೆ ಇಂಜಿನ್ ಮೀನುಗಾರಿಕಾ ದೋಣಿಗಳನ್ನ ಪೆಟ್ರೋಲ್, ಡೀಸೆಲ್ ಇಂಜಿನ್ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 4000 ಸೀಮಎಣ್ಣೆ ಇಂಜಿನ್ಗಳ ಬದಲಾವಣೆಗೆ 20 ಕೋಟಿ ರೂ.ಗಳ ಸಹಾಯಧನ ಒದಗಿಸಲಾಗಿರುತ್ತದೆ. ಮೀನುಗಾರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು ರೂ. 50 ಸಾವಿರಗಳಿಂದ ರೂ. 3 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು.
ಮೀನುಗಾರರ ದೋಣಿಗಳಿಗೆ ನೀಡಲಾಗುತ್ತಿದ್ದ ಕರ ರಹಿತ ಡಿಸೇಲ್ 1.50 ಲಕ್ಷ ಕಿಲೋ ಲೀಟರ್ ನಿಂದ 2 ಲಕ್ಷ ಕಿಲೋ ಲೀಟರ್ಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 3400 ಕ್ಕೂ ಹೆಚ್ಚು ಮೀನುಗಾರರ ದೋಣಿಗಳಿಗೆ ಇದರ ಲಾಭ ದೊರಕಲಿದೆ. ಕೇಂದ್ರ ಸರ್ಕಾರದಿಂದ ಪಡಿತರ ದರದಲ್ಲಿ ಸಮಯಕ್ಕೆ ಸರಿಯಾಗಿ ಸೀಮೆ ಎಣ್ಣೆ ಪೂರೈಕೆಯಾಗುತ್ತಿಲ್ಲ. ನಾಡದೋಣಿ ಮಾಲೀಕರಿಗೆ ನಿರಂತರವಾಗಿ ಸೀಮೆಎಣ್ಣೆಯನ್ನು ಪೂರೈಸಲು ರಾಜ್ಯ ಸರ್ಕಾರ ರಾಜ್ಯದ ಅನುದಾನ ಬಳಸಲು ತೀರ್ಮಾನಿಸಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇದನ್ನೂ ಓದಿ: ಹಗರಣಗಳಿಂದ ಪಾರಾಗಲು ನನ್ನ ವಿರುದ್ಧ ಹೈಕಮಾಂಡ್ಗೆ ದೂರು: ಬಿ ಕೆ ಹರಿಪ್ರಸಾದ್