ಮಂಗಳೂರು: ಸಚಿವ ಕೆ. ಎಸ್. ಈಶ್ವರಪ್ಪ ಅವರ ವಿರುದ್ಧ 40% ಕಮಿಷನ್ ಆಪಾದನೆ ಕೇಳಿ ಬಂದಿದೆ ಎಂದಾಕ್ಷಣ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ ಎಂದು ಸಚಿವ ಡಾ. ಸಿ. ಎನ್.ಅಶ್ವತ್ಥ್ ನಾರಾಯಣ್ ಹೇಳಿದರು. ಈಶ್ವರಪ್ಪರ ವಿರುದ್ಧ ಕಮಿಷನ್ ಆರೋಪ ಮಾಡಿದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಪಡೆಯಲಾಗುತ್ತದೆ. ಆತ್ಮಹತ್ಯೆ ಯಾವ ಕಾರಣಕ್ಕೆ ಆಯಿತೆಂದು ಮಾಹಿತಿ ಪಡೆಯುವ ಕಾರ್ಯ ಆಗುತ್ತಿದೆ ಎಂದರು.
ಸತ್ಯ ಸತ್ಯವಾಗಿಯೇ ಇರುತ್ತದೆ. ಸತ್ಯವನ್ನು ಮರೆಮಾಚುವಂತದ್ದು, ಮುಚ್ಚಿಡುವಂಥದ್ದು ಏನೂ ಇಲ್ಲ. ಮಾಹಿತಿ ಬರಲು ಕಾಯಬೇಕಾಗುತ್ತದೆ. ಏನೆಂದು ತಿಳಿಯದೆ ಈಶ್ವರಪ್ಪ ಅವರನ್ನು ರಾಜಿನಾಮೆ ಕೇಳಲು ಸಾಧ್ಯವಿಲ್ಲ. ಸತ್ಯ ಏನೆಂದು ತಿಳಿದು ಆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಬಿಜೆಪಿ ಪಕ್ಷ ಹಾಗೂ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದ ವಿರುದ್ಧವಾಗಿದೆ. ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣ ಮಾಡಲು ಸಂಪೂರ್ಣ ಬದ್ಧವಾಗಿದೆ ಎಂದು ತಿಳಿಸಿದರು.
ಈ ದಿಕ್ಕಿನಲ್ಲಿ ಪ್ರಧಾನಿ ಮೋದಿ ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಹಣ ಬರುವ ಹಾಗೂ ಹೋಗುವ ವಿಚಾರದಲ್ಲಿ ಅಕೌಂಟೇಬಲಿಟಿ ತರಲು ಆಧಾರ್ ಲಿಂಕ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸಮಾಜದಲ್ಲಿ ಹಣಕಾಸು ವ್ಯವಹಾರ ಅಕೌಂಟೆಬಿಲಿಟಿ ಇರಬೇಕೆಂದು ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ಹೇಳಿದರು.
ಇದನ್ನೂ ಓದಿ: ಸಂತೋಷ ಪಾಟೀಲ್ ಸಾವಿಗೆ ನ್ಯಾಯ ಸಿಗ್ಬೇಕು.. ಸ್ನೇಹಿತ ಸುನೀಲ್ ಪವಾರ ಒತ್ತಾಯ