ಬೆಳ್ತಂಗಡಿ: ಕಾಡು ಪ್ರಾಣಿಗಳು ಕಾಡಿನಲ್ಲಿ ಸರಿಯಾದ ಆಹಾರ ಸಿಗದೆ ನಾಡಿಗೆ ಬರುತ್ತಿದ್ದು, ಇದಕ್ಕಾಗಿ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರಕ್ಕಾಗಿ ಹಣ್ಣು ಹಾಗೂ ಇತರ ಮರ ಬೆಳೆಸುವ ಬಗ್ಗೆ ವೀರೇಂದ್ರ ಹೆಗ್ಗಡೆಯವರ ಚಿಂತನೆ ಶ್ಲಾಘನೀಯ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಧರ್ಮಸ್ಥಳದಲ್ಲಿ ಶನಿವಾರ ಸನ್ನಿಧಿ ಅತಿಥಿ ಗೃಹದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 100 ಎಕರೆ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಜನೆ ಇದೇ ಜೂನ್ 5ರಂದು ಪ್ರಾರಂಭಗೊಳ್ಳಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಯೋಜನೆಗೆ ಚಾಲನೆ ನೀಡುವರು. ಸಾರ್ವಜನಿಕರ ಸಹಕಾರದೊಂದಿಗೆ ಜಪಾನಿನ ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಬೆಳೆಸುವ ಯೋಜನೆ ರೂಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮೇ 15ರೊಳಗೆ ಈ ಬಗ್ಯೆ ಅರಣ್ಯ ಇಲಾಖೆ ವತಿಯಿಂದ ತರಬೇತಿ ನೀಡಿ, ಜೂ.5 ರಂದು ಸಾಂಕೇತಿಕವಾಗಿ ಯೋಜನೆಗೆ ಚಾಲನೆ ನೀಡಲಾಗುವುದು. ಬೆಳ್ತಂಗಡಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಈ ಯೋಜನೆಯನ್ನು ಮುಂದಿನ ವರ್ಷ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮಂಗಳೂರು ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕ್ಕಳ ಅವರನ್ನು ಯೋಜನೆಗೆ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸಚಿವರು ನಿರ್ದೇಶನ ನೀಡಿದರು. ಬೇಡಿಕೆಗನುಗುಣವಾಗಿ ಹಣ್ಣಿನ ಗಿಡಗಳನ್ನು ಮತ್ತು ಬೀಜಗಳನ್ನು ಪೂರೈಸುವಂತೆ ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ಜಾಗತಿಕ ಗ್ರಾಮದ ಕಲ್ಪನೆಯೊಂದಿಗೆ ವಿಶ್ವದ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ, ಇಡೀ ವಿಶ್ವವೇ ನಮ್ಮ ಮನೆ ಎಂಬ ಭಾವನೆಯಿಂದ ಭೂಮಿಯನ್ನು ಚೆನ್ನಾಗಿ ರಕ್ಷಣೆ ಮಾಡಿ, ಪ್ರಕೃತಿ-ಪರಿಸರವನ್ನು ಸುಸ್ಥಿತಿಯಲ್ಲಿ ಮುಂದಿನ ಜನಾಂಗಕ್ಕೆ ಬಿಟ್ಟುಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಕಾಡುಪ್ರಾಣಿಗಳು ಆಹಾರ ಅರಸಿ ನಾಡಿಗೆ ಬಂದು ರೈತರ ಕೃಷಿಗೆ ಹಾನಿ ಮಾಡುತ್ತವೆ. ಇದನ್ನು ತಡೆಗಟ್ಟಲು ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಬೇಕೆಂದು ಅರಣ್ಯ ಸಚಿವರಿಗೆ ಪತ್ರ ಬರೆದಾಗ ತಕ್ಷಣ ಸ್ಪಂದಿಸಿದ ಅವರು, ಧರ್ಮಸ್ಥಳದಲ್ಲಿ ಸಮಾಲೋಚನಾ ಸಭೆ ನಡೆಸಿರುವುದು ಸಂತೋಷವಾಗಿದೆ. ಮಾವು, ನೇರಳೆ, ಜಂಬೂ ನೇರಳೆ, ಹಲಸು, ಹೆಬ್ಬಲಸು, ಬಿದಿರು, ನೆಲ್ಲಿ, ಪುನರ್ಪುಳಿ ಮೊದಲಾದ ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಹೆಚ್.ಮಂಜುನಾಥ್ ಜನಜಾಗೃತಿ ಪ್ರಾದೇಶಿಕ ನಿರ್ದೆಶಕ ವಿವೇಕ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.