ಬೆಳ್ತಂಗಡಿ(ದಕ್ಷಿಣ ಕನ್ನಡ): ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದರು. ಇದಕ್ಕೆ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಉಲ್ಟಾ ಹೊಡೆದಿದ್ದಾರೆ.
ಈ ಕುರಿತು ಮಾತನಾಡಿದ ಆನಂದ್ ಸಿಂಗ್, ಮಾಧ್ಯಮ ಸ್ನೇಹಿತರು ನನ್ನ ಹೇಳಿಕೆಯನ್ನು ಸರಿಪಡಿಸಿಕೊಳ್ಳಬೇಕಾಗುತ್ತೆ. 'ಉತ್ತರ ಕರ್ನಾಟಕ ಹೊಸ ರಾಜ್ಯ ಅಗುತ್ತದೆ, ಅದಕ್ಕೆ ನಮ್ಮ ವಿಜಯನಗರ ರಾಜಧಾನಿ ಅಗುತ್ತದೆ ಎಂದು ನಾನು ಹೇಳಿದ್ದಲ್ಲ. ಉತ್ತರ ಕರ್ನಾಟಕದಲ್ಲಿರುವ ಬಿಜೆಪಿ ಯಾವ ಯಾವ ಜಿಲ್ಲೆಗಳಲ್ಲಿರುತ್ತವೆಯೋ, ಅದು ಪಕ್ಷಕ್ಕೆ ರಾಜಧಾನಿ ಅಗುತ್ತದೆ ಎಂದಿದ್ದೆ. ಯಾಕಂದ್ರೆ, ಜಿಲ್ಲಾ ಕೇಂದ್ರ ಯಾವುದು ಅಗಬೇಕೆಂದರೆ ರಾಯಚೂರು, ಕಲಬುರಗಿ, ಬೀದರ್, ಬಳ್ಳಾರಿ ಮತ್ತು ಹೊಸಪೇಟೆ. ಉತ್ತರ ಕರ್ನಾಟಕ ಅಂದ್ರೆ ಕಲ್ಯಾಣ ಕರ್ನಾಟಕ. ಕಲ್ಯಾಣ ಕರ್ನಾಟಕಕ್ಕೆ ನಮ್ಮ ವಿಜಯನಗರ ಕ್ಷೇತ್ರ ರಾಜಧಾನಿ ಅಗುತ್ತದೆ ಎಂದು ಹೇಳಿರುವುದು. ಪ್ರತ್ಯೇಕ ರಾಜ್ಯ ಅಗುತ್ತದೆ ಅನ್ನುವುದನ್ನು ದಯವಿಟ್ಟು ಮಾಧ್ಯಮ ಮಿತ್ರರು ಸರಿಪಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ' ಎಂದಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ವಿಜಯನಗರ ಜಿಲ್ಲೆ ಅದರ ರಾಜಧಾನಿ: ಆನಂದ್ ಸಿಂಗ್