ಮಂಗಳೂರು: ಪಚ್ಚನಾಡಿ ತ್ಯಾಜ್ಯ ಘಟಕಕ್ಕೆ ಮಂಗಳೂರು ಮನಪಾ ವ್ಯಾಪ್ತಿಗಿಂತ ಹೊರಗಿನ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾ.ಪಂ.ಗಳ ತ್ಯಾಜ್ಯಗಳನ್ನು ಸಾಗಾಟ ಮಾಡುತ್ತಿರುವುದನ್ನು ನಿಲ್ಲಸಲು ಕಾಲಾವಕಾಶ ನೀಡಲಾಗುತ್ತದೆ. ಅಲ್ಲದೇ ಅವರವರ ವ್ಯಾಪ್ತಿಯಲ್ಲಿಯೇ ತ್ಯಾಜ್ಯ ವಿಲೇವಾರಿ ನಡೆಸಲು ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುತ್ತದೆ ಎಂದು ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರು.
ಮನಪಾ ಮಂಗಳ ಸಭಾಂಗಣದಲ್ಲಿಂದು ಮೇಯರ್ ದಿವಾಕರ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಆಯಾ ಸ್ಥಳೀಯ ಸಂಸ್ಥೆಗಳಿಗೆ ಕಾಲಾವಕಾಶ ನೀಡಿ ಅವರ ವ್ಯಾಪ್ತಿಯಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲು ಪತ್ರ ಬರೆಯುವುದಾಗಿ ಹೇಳಿದರು.
ಬಂಟ್ವಾಳ, ಉಳ್ಳಾಲ ಮೊದಲಾದ ಕಡೆಗಳಿಂದ ಪಚ್ಚನಾಡಿ ಡಂಪಿಂಗ್ ಯಾರ್ಡ್ಗೆ ತ್ಯಾಜ್ಯ ಬರುತ್ತಿರುವುದರಿಂದ ಆರು ಲಕ್ಷ ಮೆಟ್ರಿಕ್ ಟನ್ ಕಸ ತುಂಬಿದೆ ಎಂದು ಮನಪಾ ಸದಸ್ಯ ಸುಧೀರ್ ಶೆಟ್ಟಿ ಹೇಳಿದರು. ಅದಕ್ಕೆ ವಿಪಕ್ಷ ಸದಸ್ಯರು ನಾಳೆಯಿಂದ ಹೊರಗಿನಿಂದ ತ್ಯಾಜ್ಯ ಬರುವುದನ್ನು ಸ್ಥಗಿತಗೊಳಿಸಲು ನಿರ್ಧರಿಸುವಂತೆ ಪಟ್ಟು ಹಿಡಿದರು. ಈ ಸಂದರ್ಭ ಮೇಯರ್, ಹಸಿಕಸ, ಒಣಕಸ ವಿಂಗಡಿಸದೆ ತರುವ ವಾಹನಗಳನ್ನು ಪಚ್ಚನಾಡಿ ತ್ಯಾಜ್ಯ ಘಟಕದ ಒಳಗೆ ಬಿಡಬೇಡಿ ಎಂದು ಹೇಳಿದರು.
ತ್ಯಾಜ್ಯ ವಿಲೇವಾರಿಯ ವಿಷಯ ಪ್ರಸ್ತಾಪಿಸಿದ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಪಚ್ಚನಾಡಿ, ಮಂದಾರ ಪ್ರದೇಶದಲ್ಲಿ ತ್ಯಾಜ್ಯ ಕುಸಿತದ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ವಿಳಂಬವಾದ ವಿಚಾರದಲ್ಲಿ ಕೋರ್ಟ್ ಛೀಮಾರಿ ಹಾಕಿದೆ. ಇದು ಪಾಲಿಕೆಗೆ ಕಪ್ಪು ಚುಕ್ಕೆಯಾಗಿದ್ದು, ಹೈಕೋರ್ಟ್ ಛೀಮಾರಿ ಹಾಕುವ ಮುನ್ನವೇ ಪರಿಹಾರ ನೀಡಬೇಕಿತ್ತು ಎಂದು ಹೇಳಿದರು.
ಸ್ಮಾರ್ಟ್ ಸಿಟಿಯಡಿಯಲ್ಲಿ ಯಾವ ಕೆಲಸಗಳು ಆಗುತ್ತಿವೆ, ಎಷ್ಟು ಖರ್ಚಾಗುತ್ತದೆ ಎಂಬ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಪಾಲಿಕೆ ಸಭೆಗೂ ಬರುತ್ತಿಲ್ಲ ಎಂದು ಅಬ್ದುಲ್ ರವೂಫ್ ಆರೋಪಿಸಿದರು. ಸ್ಮಾರ್ಟ್ ಸಿಟಿಯ ಹೊಸ ಯೋಜನೆಗಳಿಗೆ ಪರಿಷತ್ ಅನುಮೋದನೆ ಪಡೆಯಬೇಕು ಎಂದು ಆಡಳಿತ ಪಕ್ಷದ ಪ್ರೇಮಾನಂದ ಶೆಟ್ಟಿ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿ, ಆದಷ್ಟು ಬೇಗ ಸ್ಮಾರ್ಟ್ ಸಿಟಿ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಮೇಯರ್ ತಿಳಿಸಿದರು.