ಮಂಗಳೂರು:ನಗರದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ, ಶೇ.90ರಷ್ಟು ಸಿಸಿ ಕ್ಯಾಮರಾಗಳು ಕ್ರಿಯಾಶೀಲವಾಗಿಲ್ಲ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಇದರಿಂದ ನಗರದ ಭದ್ರತೆಗೂ ತೊಡಕಾಗುತ್ತಿದೆ ಎಂದು ಮಂಗಳೂರು ಮನಪಾ ಸದಸ್ಯ ಎ.ಸಿ.ವಿನಯರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಮನಪಾ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಸಿಸಿ ಕ್ಯಾಮರಾಗಳನ್ನು ನಿರ್ವಹಣೆ ಮಾಡಲು ವಹಿಸಿಕೊಂಡಿರುವ ಗುತ್ತಿಗೆ ಕಂಪನಿಗಳೂ ಇದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪರಿಣಾಮ ಇತ್ತೀಚೆಗೆ ನಗರದಲ್ಲಿ ಎರಡು ಕಡೆಗಳಲ್ಲಿ ವಿವಾದಿತ ಗೋಡೆ ಬರಹಗಳು ಕಂಡು ಬಂದಿದೆ. ಸಿಸಿ ಕ್ಯಾಮರಾಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇರುವುದರಿಂದ ಈವರೆಗೆ ಆರೋಪಿಗಳ ಸುಳಿವು ಲಭ್ಯವಾಗಿಲ್ಲ ಎಂದು ಹೇಳಿದರು.
ಇದೊಂದು ಗಂಭೀರ ವಿಚಾರವಾಗಿದ್ದು, ರಾಜ್ಯ ಸರ್ಕಾರ ಕೂಲಂಕಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಹಾಗೆಯೇ ನಗರದಲ್ಲಿನ ಸರಿಯಾಗಿ ನಿರ್ವಹಣೆ ಮಾಡದ ಎಲ್ಲ ಸಿಸಿ ಕ್ಯಾಮರಾಗಳನ್ನು ತಕ್ಷಣ ದುರಸ್ತಿ ಮಾಡಬೇಕೆಂದು ವಿನಯರಾಜ್ ಆಗ್ರಹಿಸಿದರು. ಇದಕ್ಕೆ ಮೇಯರ್ ಸೇರಿದಂತೆ ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.
ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಲಾಗಿರುವ ದ್ವಿಚಕ್ರ, ಚತುಷ್ಚಕ್ರ ವಾಹನಗಳನ್ನು ಟೋಯಿಂಗ್ ಮಾಡಿ ಕೊಂಡೊಯ್ಯಲಾಗುತ್ತಿದೆ. ಬೈಕ್ಗಳಿಗೆ 1,650 ರೂ. ದಂಡ ವಿಧಿಸಲಾಗುತ್ತದೆ. ಬಡವರಿಗೆ ಇಷ್ಟೊಂದು ಹಣ ದಂಡ ವಿಧಿಸಲು ಸಾಧ್ಯವೇ. ರಸ್ತೆ ದುರಸ್ತಿಗಾಗಿ ಎಲ್ಲ ಕಡೆಗಳಲ್ಲಿ ಬಂದ್ ಮಾಡಿರುವುದರಿಂದ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇರದ ಕಾರಣ ಜನರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುತ್ತಿದ್ದಾರೆ ಎಂದರು.
ಮೇಯರ್ ನೇತೃತ್ವದಲ್ಲಿ ಸಾರಿಗೆ ಸಮಿತಿ ಇದ್ದು, ಮುಂದೆ ಈ ಸಭೆ ಆಗುವವರೆಗೆ ಟೋಯಿಂಗ್ ವಾಹನ ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಲಾಗಿರುವ ವಾಹನಗಳನ್ನು ಕೊಂಡೊಯ್ಯವುದನ್ನು ನಿಲ್ಲಿಸಬೇಕು. ಹಾಗೆಯೇ ಮೇಯರ್ ನೇತೃತ್ವದಲ್ಲಿ ಮುಂದಿನ ಸಭೆಯಲ್ಲಿ ಸರಿಯಾದ ನಿರ್ಣಯ ಕೈಗೊಂಡ ಬಳಿಕ ಟೋಯಿಂಗ್ ವಾಹನ ಸಂಚರಿಸಲಿ. ಅಲ್ಲದೇ ಮಂಗಳೂರು ಮನಪಾ ಸಾಮಾನ್ಯ ಸಭೆಯಲ್ಲಿ ಎಸಿಪಿ ಮಟ್ಟಕ್ಕಿಂತ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳು ಹಾಜರಿರಬೇಕು ಎಂದು ಅವರು ವಿನಂತಿಸಿದರು.
ನಗರದ ಎಲ್ಲ ಕಡೆಗಳಲ್ಲಿ ಡಿವೈಡರ್, ಫುಟ್ಪಾತ್ಗಳ ಮೇಲೆ ವಿವಿಧ ತಂತಿಗಳು ನೇತಾಡುತ್ತಿವೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗುತ್ತಿದ್ದು, ಅಪಘಾತಗಳೂ ನಡೆಯುವ ಸಂಭವ ಅಧಿಕವಿದೆ. ಈ ಬಗ್ಗೆ ಇಂಜಿನಿಯರ್ಗಳು, ಜೆಇಗಳು ಮನಪಾ ಆಯುಕ್ತರಿಗೆ ಈ ಬಗ್ಗೆ ದೂರು ನೀಡುತ್ತಿಲ್ಲ. ಮೆಸ್ಕಾಂನವರಿಗೆ ಸರ್ಕಾರ ಕೊಟ್ಟಿದೆ ಎಂದು ಒಟ್ಟಾರೆ ತಂತಿಗಳನ್ನು ಅಳವಡಿಸಲು ಅವಕಾಶವಿಲ್ಲ. ತಕ್ಷಣ ಅವರು ಕೆಲಸ ಸ್ಥಗಿತಗೊಳಿಸಲಿ ಎಂದು ಮನಪಾ ಸದಸ್ಯ ಅನಿಲ್ ಡಿಸೋಜ ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಸಾರ್ವಜನಿಕರಿಗೆ ತೊಂದರೆ ಇರುವಲ್ಲಿ ತಕ್ಷಣ ಇಂಜಿನಿಯರಿಂಗ್ ವಿಭಾಗದವರಿಗೆ ತಿಳಿಸಿ ಸರಿಪಡಿಸಲಾಗುತ್ತದೆ ಎಂದು ಹೇಳಿದರು.
ಕಲಾಪ ನುಂಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ ನಾಮಕರಣ: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ 'ಶ್ರೀ ನಾರಾಯಣ ಗುರುದೇವ ರೈಲ್ವೆ ಸ್ಟೇಷನ್' ಎಂದು ನಾಮಕರಣ ಮಾಡಬೇಕೆಂದು ಮನಪಾ ವಿಪಕ್ಷ ಸದಸ್ಯ ಅಬ್ದುಲ್ ರವೂಫ್ ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮನಪಾ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಅವರು, ಈ ಹಿಂದೆ ಇದೇ ಸದನದಲ್ಲಿ ನಾವು ವೃತ್ತವೊಂದಕ್ಕೆ ನಾರಾಯಣ ಗುರುಗಳ ಹೆಸರನ್ನು ಮರುನಾಮಕರಣ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದಾಗ ಇವರದ್ದೇ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸುಮಾರು ಹೊತ್ತು ಈ ವಾಗ್ವಾದ ನಡೆಯಿತು. ಈ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ನಾಮಕರಣ ಇಡೀ ಕಲಾಪವನ್ನು ನುಂಗಿಹಾಕಿತು.