ಮಂಗಳೂರು: ನೆರೆಮನೆಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ತಮ್ಮ ಮನೆಗೆ ಪತಿ ಒಟ್ಟಿಗೆ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸುರತ್ಕಲ್ನಲ್ಲಿ ನಡೆದಿದೆ. ಬಾಳ ಗ್ರಾಮದ ಒಟ್ಟೆಕಾಯರ್ನ ಹರೀಶ್ ಎಂಬವರ ಪತ್ನಿ ದಿವ್ಯಾ (26) ಆತ್ಮಹತ್ಯೆ ಮಾಡಿಕೊಂಡವರು. ಹರೀಶ್ ಅವರು ಸುರತ್ಕಲ್ನಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ದಿವ್ಯಾ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ನಾಲ್ಕು ಗಂಟೆಯ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ದಿವ್ಯಾ ಅವರ ತಾಯಿ ಗಿರಿಜಾ ದೂರು ನೀಡಿದ್ದು, ಮಗಳ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ.
ಸಾವಿನ ಬಗ್ಗೆ ಸಂಶಯವಿಲ್ಲ: ನಮಗೆ ಮೂರು ಮಕ್ಕಳು. ಅವರಲ್ಲಿ ದಿವ್ಯಾ ಮೊದಲನೆಯವಳು. ಆಕೆ ನಗರದ ಲೇಡಿಹಿಲ್ನ ಅಮನ್ ಫಾರ್ಮ್ ಎಂಬ ಮೆಡಿಕಲ್ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಅನ್ಯ ಜಾತಿಯ ಹರೀಶ್ ಎಂಬ ಹುಡುಗನನನ್ನು ಪ್ರೀತಿಸುತ್ತಿದ್ದಳು. 2022 ಮಾರ್ಚ್ 24 ರಂದು ದಿವ್ಯ ಹಾಗೂ ಹರೀಶ್ ಮಂಗಳೂರಿನ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದರು. ಇವರು ಮದುವೆಯಾದ ವಿಚಾರ ನಮಗೆ ತಡವಾಗಿ ತಿಳಿದಿತ್ತು. ಆದರೂ ನಾವು ಮನಸ್ತಾಪ ಇಟ್ಟುಕೊಂಡಿರಲಿಲ್ಲ. ಅವರ ಮನೆಗೆ ಹೋಗಿ ಆತನ ತಂದೆ-ತಾಯಿ ಜೊತೆಗೆ ಮಾತಾಡಿಕೊಂಡು ಬರುತ್ತಿದ್ದೆವು. ಅವರು ಕೂಡ ನಮ್ಮ ಮನೆಗೆ ಬಂದು ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ದಂಪತಿ ಅನ್ಯೋನ್ಯವಾಗಿದ್ದರು.
ನಮ್ಮ ಮಗಳು ದಿವ್ಯ ಮುಂಗೋಪಿ. ಅವಳು ಹೇಳಿದಂತೆ ನಡೆಯಬೇಕಿತ್ತು. ಬಾಲ್ಯದಿಂದಲೇ ಈ ರೀತಿ ಹಠ ಹಿಡಿಯುತ್ತಿದ್ದಳು. ನೆರೆಮನೆಯಲ್ಲಿ ಶನಿವಾರ ನಡೆದಿದ್ದ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಟ್ಟಿಗೆ ಭಾಗವಹಿದ್ದರು. ಅಲ್ಲಿಂದ ಮನೆಗೆ ಹೊರಡುವಾಗ ಹರೀಶ್ ತಡ ಮಾಡಿದ್ದರು. ಈ ಕಾರಣದಿಂದ ಅಸಮಾಧಾನಗೊಂಡಿದ್ದ ದಿವ್ಯಾ ಒಬ್ಬಳೇ ಮನೆಗೆ ಮರಳಿದ್ದಳು. ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಮದುವೆ ಸಮಯದಲ್ಲಿ ನಾವು ಯಾವುದೇ ವರದಕ್ಷಿಣೆಯನ್ನು ಹರೀಶ್ ಅವರ ಕಡೆಯವರಿಗೆ ನೀಡಿರುವುದಿಲ್ಲ. ಅವರು ಕೂಡ ನಮ್ಮಲ್ಲಿ ಮದುವೆ ಖರ್ಚು, ವರದಕ್ಷಿಣೆ ಕೇಳಿರುವುದಿಲ್ಲ. ಈ ಸಾವಿನಲ್ಲಿ ಯಾವುದೇ ಸಂದೇಹ ಇರುವುದಿಲ್ಲ ಎಂದು ಮೃತ ದಿವ್ಯಾ ಅವರ ತಾಯಿ ತಿಳಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಗನಸಖಿ ಆತ್ಮಹತ್ಯೆ: ಮತ್ತೊಂದೆಡೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 27 ವರ್ಷದ ಗಗನಸಖಿಯೊಬ್ಬರು ಶನಿವಾರ ಕೋಲ್ಕತ್ತಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಯಮಿತವಾದ ಉದ್ಯೋಗ ಇಲ್ಲದ ಕಾರಣದಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದ ಗಗನಸಖಿ ರಸ್ತೆಯ ಮೇಲೆ ಬಿದ್ದಿದ್ದರು. ತೀವ್ರ ಗಾಯಗಳಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಎಸ್‌ಎಸ್‌ಕೆಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಸರಿಯಾದ ಕೆಲಸವಿಲ್ಲವೆಂದು ಖಿನ್ನತೆ.. ಗಗನಸಖಿ ಆತ್ಮಹತ್ಯೆ