ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ತೋಟವೊಂದರಲ್ಲಿ ವ್ಯಕ್ತಿಯೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳಾರ ಸಮೀಪದ ಅಡ್ಕಾಡಿ ನಿವಾಸಿ ಉಸ್ಮಾನ್ ಮೃತಪಟ್ಟ ವ್ಯಕ್ತಿ. ಉಸ್ಮಾನ್ ನಿನ್ನೆ ರಾತ್ರಿ 9 ಗಂಟೆಯ ಬಳಿಕ ಮನೆಯಿಂದ ನಾಪತ್ತೆಯಾಗಿದ್ದು, ಮನೆಯವರು ತೀವ್ರ ಶೋಧ ನಡೆಸಿದ್ದರು. ಉಸ್ಮಾನ್ ಮೃತದೇಹ ರಬ್ಬರ್ ತೋಟದಲ್ಲಿನ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಕ್ಷಣ ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗಿದೆ. ಮೃತದೇಹವನ್ನು ಗಮನಿಸಿದಾಗ ಸಂಶಯ ಉಂಟಾಗುತ್ತಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿ ಮೃತರ ಪುತ್ರ ಅಬ್ದುಲ್ ಖಾದರ್ ಎಂಬುವವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.