ಮಂಗಳೂರು (ದಕ್ಷಿಣ ಕನ್ನಡ): ಅ.18ರಂದು ಸುರತ್ಕಲ್ನ ಎನ್ಐಟಿಕೆ ಟೋಲ್ ಗೇಟ್ ತೆರವು ಮಾಡುವಂತೆ ಹೋರಾಟಕ್ಕಿಳಿದಿರುವ ಹೋರಾಟಗಾರರ ಮನೆಗಳಿಗೆ ಪೊಲೀಸರು ರಾತ್ರೋರಾತ್ರಿ ಭೇಟಿ ನೀಡಿ ನೋಟಿಸ್ ನೀಡಿರುವ ಘಟನೆ ನಡೆದಿದೆ. ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರ ಮನೆಗಳಿಗೆ ರಾತ್ರಿ ತೆರಳಿ ಸುರತ್ಕಲ್ ಪೊಲೀಸರು ನೋಟಿಸ್ ನೀಡಿದ್ದಾರೆ.
ಈಗಾಗಲೇ ಸಭೆ ನಡೆಸಿ ಹೋರಾಟ ಹಿಂಪಡೆಯುವಂತೆ ಸೂಚಿಸಲಾಗಿತ್ತು. ಆದರೆ ಅದನ್ನು ಹೋರಾಟ ಸಮಿತಿ ತಿರಸ್ಕರಿಸಿ ಹೋರಾಟ ಮುಂದುವರಿಸಿದೆ. ಹಾಗಾಗಿ ನೋಟಿಸ್ ತಲುಪಿದ ಕೂಡಲೇ ಡಿಸಿಪಿ ಅವರ ಕಚೇರಿಗೆ ಭೇಡಿ ನೀಡಿ ಹೋರಾಟ ಮುಂದುವರಿಸುವುದಿಲ್ಲ ಎಂದು ಎರಡು ಲಕ್ಷ ರೂ. ಮೊತ್ತದ ಬಾಂಡ್ಗೆ ಮುಚ್ಚಳಿಕೆ ಬರೆದುಕೊಡಲು ಸೂಚಿಸಲಾಗಿದೆ.
![Mangaluru toll gate protest - Notice to leaders houses](https://etvbharatimages.akamaized.net/etvbharat/prod-images/16659609_bvfserh.jpg)
ಫೇಸ್ಬುಕ್ನಲ್ಲಿ ಈ ಬಗ್ಗೆ ಬರೆದಿರುವ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅವರು ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೇ ? ಮಹಿಳಾ ಹೋರಾಟಗಾರರ ಮನೆಗೂ ರಾತ್ರಿ ಪೊಲೀಸರ ದಂಡು! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೇ ಎಚ್ಚರ ಎಂದಿದ್ದಾರೆ.
ಇದನ್ನೂ ಓದಿ: ಮಡಿಕೇರಿಯಲ್ಲಿ 50 ಕಡೆ ಪೆಟ್ರೋಲ್ ಬಾಂಬ್ ಹಾಕುವ ಸಂಭಾಷಣೆ ವೈರಲ್: ಇಬ್ಬರು ಆರೋಪಿಗಳು ವಶಕ್ಕೆ