ಪುತ್ತೂರು (ದಕ್ಷಿಣಕನ್ನಡ) : ಜಿಮ್ ಹಾಗು ಇನ್ನಿತರ ಆಧುನಿಕ ಫಿಟ್ನೆಸ್ ಸೆಂಟರ್ಗಳ ಭರಾಟೆಯ ನಡುವೆಯೂ, ಪ್ರಾಚೀನ, ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಈ ವ್ಯಾಯಾಮ ಶಾಲೆಗಳು ದೇಹದಾರ್ಢ್ಯ ಪ್ರದರ್ಶನದ ಜೊತೆಗೆ ಆಕರ್ಷಕ ಹಾಗು ಸಾಹಸಮಯ ತಾಲೀಮು ಪ್ರದರ್ಶನ ನಡೆಸಿಕೊಂಡು ಬಂದಿವೆ.
ಗ್ರಾಮದಲ್ಲಿನ ಉತ್ಸವಗಳು, ಮೆರವಣಿಗೆಗಳಲ್ಲಿ ಈ ವ್ಯಾಯಾಮ ಶಾಲೆಗಳಿಂದ ತರಬೇತಿ ಪಡೆದ ಮಕ್ಕಳು ಮತ್ತು ಯುವಕರು ಆಕರ್ಷಕ ತಾಲೀಮು ಪ್ರದರ್ಶಿಸುತ್ತಾ ಬಂದಿದ್ದಾರೆ. ಬೆಂಕಿ, ಹರಿತವಾದ ಆಯುಧಗಳನ್ನು ಬಳಸಿಕೊಂಡು ಮಕ್ಕಳು ಮತ್ತು ಯುವಕರು ಮಾಡುವ ತಾಲೀಮು ಪ್ರದರ್ಶನ ನೋಡುವುದೇ ಕಣ್ಣಿಗೆ ಹಬ್ಬವಾಗಿದೆ.
ಸಾಂಪ್ರದಾಯಿಕ ಸಾಹಸ ಪ್ರದರ್ಶನ : ರಾಜ-ಮಹಾರಾಜರ ಕಾಲದಿಂದಲೂ ಈ ಸಾಹಸ ಪ್ರದರ್ಶನ ನಡೆದುಕೊಂಡು ಬಂದಿದೆ. ಈ ಸಂಪ್ರದಾಯವನ್ನು ಹಳೆಯ ಕಾಲದ ವ್ಯಾಯಾಮ ಶಾಲೆಗಳು ಇಂದಿಗೂ ಮುಂದುವರಿಸಿಕೊಂಡು ಬರುತ್ತಿವೆ. ತಾಲೀಮಿನಲ್ಲಿ ಸುಮಾರು 42 ಪ್ರಕಾರದ ಪ್ರದರ್ಶನಗಳಿದ್ದು, ಸಿಂಗಲ್ ಬಾಣ, ಡಬಲ್ ಬಾಣ, ಬಣ್ಣೋಟ್ಟಿಗಳನ್ನು ವಿವಿಧ ದಿಕ್ಕುಗಳಲ್ಲಿ ತಿರುಗಿಸುವುದು ಮುಂತಾದವುಗಳನ್ನು ಕಾಣಬಹುದು.
ತಾಲೀಮಿನಲ್ಲಿ ವಿವಿಧ ಸಾಹಸ ಪ್ರದರ್ಶನ : ತಾಲೀಮಿನಲ್ಲಿ ಪಾಲ್ಗೊಳ್ಳುವವರು ಈ ಬಣ್ಣೋಟ್ಟಿಗಳ ತುದಿಗೆ ಕಟ್ಟಿದ ಬಟ್ಟೆಯನ್ನು ಸೀಮೆ ಎಣ್ಣೆಯಲ್ಲಿ ಅದ್ದಿ ಬೆಂಕಿ ಹಚ್ಚಿ ಎಲ್ಲಾ ದಿಕ್ಕುಗಳಿಗೆ ಎಂಟು ಬಾರಿ ತಿರುಗಿಸಲಾಗುತ್ತದೆ. ಇದು ಒಂದು ಪ್ರಕಾರದ ಸಾಹಸ ಪ್ರದರ್ಶನವಾಗಿದೆ. ಅದೇ ರೀತಿಯಲ್ಲಿ ಹರಿತವಾದ ಕತ್ತಿಯಿಂದ ವ್ಯಕ್ತಿಯ ತಲೆ, ಹೊಟ್ಟೆ, ಕೈ-ಕಾಲುಗಳ ಮೇಲೆ ಇಟ್ಟಂತಹ ಸೌತೆಕಾಯಿಗಳನ್ನು ವ್ಯಕ್ತಿಯ ದೇಹಕ್ಕೆ ಯಾವುದೇ ತೊಂದರೆ ಆಗದಂತೆ ಸೌತೆಕಾಯಿಯನ್ನು ಕತ್ತರಿಸುವ ಪ್ರದರ್ಶನ, ತೆಂಗಿನಕಾಯಿಯನ್ನು ತಲೆ ಮತ್ತು ಕೈಗಳಿಂದ ಒಡೆಯುವ ಸಾಹಸ, ಅಲ್ಲದೆ ವೃತ್ತಾಕಾರದ ವಸ್ತುವಿಗೆ ಸಂಪೂರ್ಣವಾಗಿ ಬೆಂಕಿ ಹಚ್ಚಿ, ಆ ಬೆಂಕಿಯ ಮಧ್ಯೆ ಹಾರುವ ಪ್ರದರ್ಶನ ಹೀಗೆ ತಾಲೀಮಿನಲ್ಲಿ ವಿವಿಧ ಪ್ರದರ್ಶನಗಳನ್ನು ನಡೆಸಲಾಗುತ್ತದೆ.
ಮಂಗಳೂರಿನ ಪೊಲೀಸ್ ಲೈನ್ನಲ್ಲಿರುವ ಮುನೀಶ್ವರ ಮಹಾಗಣಪತಿ ವ್ಯಾಯಾಮ ಶಾಲೆಯು ಕಳೆದ ನೂರು ವರ್ಷಗಳಿಂದ ತಾಲೀಮು ಪ್ರದರ್ಶನ ನಡೆಸಿಕೊಂಡು ಬರುತ್ತಿದೆ. ಸರಿಯಾದ ತರಬೇತಿಯಿಲ್ಲದೆ ತಾಲೀಮು ಪ್ರದರ್ಶನದಲ್ಲಿ ಒಂದು ಸಾಮಾನ್ಯ ಪ್ರದರ್ಶನವನ್ನೂ ನೀಡಲು ಸಾಧ್ಯವಿಲ್ಲ ಎಂದು ಮುನೀಶ್ವರ ಮಹಾಗಣಪತಿ ವ್ಯಾಯಾಮ ಶಾಲೆಯ ಹಿರಿಯ ಸದಸ್ಯ ಪುತ್ತೂರಿನ ಉದಯಕುಮಾರ್ ಹೇಳುತ್ತಾರೆ.
ತಾಲೀಮು ಪ್ರದರ್ಶನಕ್ಕೆ ಹೆಚ್ಚಿನ ತರಬೇತಿ ಅಗತ್ಯ : ತಾಲೀಮು ಪ್ರದರ್ಶನ ನಡೆಸಲು ದಿನಕ್ಕೆ ಒಂದರಿಂದ ಎರಡು ಗಂಟೆಗಳ ತರಬೇತಿ ಅಗತ್ಯವಿದೆ. ನಾಲ್ಕನೇ ತರಗತಿಯಲ್ಲಿರುವಾಗ ತಾಲೀಮು ಪ್ರದರ್ಶನ ತಂಡಕ್ಕೆ ಸೇರಿದ್ದು, ಸುಮಾರು 52 ವರ್ಷಗಳಿಂದ ತಾಲೀಮು ಪ್ರದರ್ಶನ ನೀಡಿಕೊಂಡು ಬರುತ್ತಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳು ಇರುವ ಕಡೆಗಳಲ್ಲಿ ಹೆಚ್ಚಾಗಿ ತಾಲೀಮು ತಂಡಗಳನ್ನು ಆಹ್ವಾನಿಸುತ್ತಾರೆ. ಒಂದು ತಂಡದಲ್ಲಿ ಕನಿಷ್ಠ 25 ಜನರಿರುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಈ ಸಾಹಸಮಯ ತಾಲೀಮಅನ್ನು ಪ್ರದರ್ಶನಕಾರರು ನೀಡುತ್ತಾರೆ. ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದಾಗಿ ತಾಲೀಮು ಪ್ರದರ್ಶನಗಳು ಕಡಿಮೆಯಾಗುತ್ತಿವೆ ಎಂದು ಉದಯಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಬೈಯುತ್ತಾ, ಭಿಕ್ಷೆ ಬೇಡುತ್ತಾ, ನೃತ್ಯ ಮಾಡಿ ಹರಕೆ ತೀರಿಸುವ ಭಕ್ತರು.. ಜೇನು ಕುರುಬರಿಂದ ವಿಶೇಷ ಆಚರಣೆ