ಮಂಗಳೂರು: ಪುತ್ತೂರು ತಾಲೂಕು ಹೊರವಲಯದ ತೆಂಕಿಲ ದರ್ಖಾಸು ಎಂಬಲ್ಲಿರುವ ಗೇರು ತೋಟದ ಗುಡ್ಡದಲ್ಲಿ ಕಾಣಿಸಿಕೊಂಡಿರುವ ಬಿರುಕು ಮತ್ತಷ್ಟು ವಿಸ್ತಾರಗೊಂಡಿದ್ದು, ಜನ ಅಪಾಯದ ಭೀತಿಯಲ್ಲಿದ್ದಾರೆ.
ಗುಡ್ಡದಲ್ಲಿ ಬಿರುಕು ಕಾಣಸಿಕೊಂಡ ಬಳಿಕ ಅಪಾಯದ ಭೀತಿಯಲ್ಲಿದ್ದ ಅಲ್ಲಿನ ನಿವಾಸಿಗಳು ಶನಿವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದ ಕಾರಣ, ಇನ್ನೇನೂ ದೊಡ್ಡ ಮಟ್ಟದ ಸಮಸ್ಯೆಯಾಗದು ಎಂದು ಭಾವಿಸಿದ್ದರು. ಆದರೆ ಈ ಭಾಗದಲ್ಲಿ ಸೋಮವಾರ ಸಂಜೆಯಿಂದ ಮತ್ತೆ ಮಳೆ ಸುರಿಯತೊಡಗಿದ್ದು, ಬಿರುಕು ಮತ್ತಷ್ಟು ದೊಡ್ಡದಾಗಿದೆ. ಇದರಿಂದ ಇಲ್ಲಿನ ನಿವಾಸಿಗಳು ಶಾಶ್ವತವಾಗಿ ತಮ್ಮ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಭಾನುವಾರ ಗುಡ್ಡದ ತಪ್ಪಲು ಪ್ರದೇಶದ ಮಧ್ಯಭಾಗದಲ್ಲಿ 200 ಮೀಟರ್ ಉದ್ದ ಒಂದು ಇಂಚಿನಷ್ಟು ಅಗಲದ ಬಿರುಕು ಮಂಗಳವಾರದ ವೇಳೆಗೆ 3 ಇಂಚಿನಷ್ಟು ವಿಸ್ತಾರಗೊಂಡಿದೆ. ಅಲ್ಲದೆ ಮಣ್ಣಿನ ಕೆಳಭಾಗದ ಪದರವೂ 3 ಇಂಚಿನಷ್ಟು ಕೆಳಕ್ಕೆ ಸರಿದಿದೆ. ಗುಡ್ಡದ ಮೇಲ್ಭಾಗದ ತಪ್ಪಲಿನಲ್ಲಿಯೂ ನೇರವಾಗಿ ಹಾಗೂ ಅಡ್ಡವಾಗಿ ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದ್ದು, ಭೂಕಂಪದ ಸಾಧ್ಯತೆ ಹೆಚ್ಚಾಗಿದೆ.
ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ, ಅಂತರ್ಜಲ ಪರಿಶೋಧಕಿ ವಸುಧಾ ನಿನ್ನೆ ಮಧ್ಯಾಹ್ನ ತೆಂಕಿಲ ಗುಡ್ಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭೂ ಕಂಪನ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುವ ಅಪಾಯದ ಸೂಚನೆ ನೀಡಿದ ಹಿನ್ನಲೆಯಲ್ಲಿ ಅಲ್ಲಿನ 11 ಕುಟುಂಬಗಳ ಮನವೊಲಿಸಿ ಸ್ಥಳಾಂತರಿಸಲಾಗಿತ್ತು. ಆರು ಕುಟುಂಬಗಳು ನಗರದ ಸಮುದಾಯ ಭವನದಲ್ಲಿ ಆಶ್ರಯ ಪಡೆದರೆ, ಉಳಿದ 5 ಕುಟುಂಬಗಳು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಆದರೆ ಎಲ್ಲವೂ ಸರಿಯಾಗಬಹುದು ಅಂದುಕೊಂಡಿರುವಾಗಲೇ ಗುಡ್ಡದಲ್ಲಿ ಬಿರುಕು ದೊಡ್ಡದಾಗಿರುವುದು ಅಲ್ಲಿನ ನಿವಾಸಿಗಳನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.