ಮಂಗಳೂರು: ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕ ಪುರುಷೋತ್ತಮರ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತದಿಂದ ಭರಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಆಟೋ ಚಾಲಕ ಪುರುಷೋತ್ತಮ ಅವರು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ, ಪುರುಷೋತ್ತಮ ಅವರ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದ್ದು, ಪುತ್ರಿಯ ಇಎಸ್ಐ ಯೋಜನೆಯಡಿಯಲ್ಲಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೃಹ ಸಚಿವರು ಸರಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ, ಅವರಿಗೆ ಈವರೆಗೆ ಯಾವುದೇ ಚಿಕಿತ್ಸಾ ವೆಚ್ಚವನ್ನು ಸರಕಾರದದ ನೀಡಲಾಗಿಲ್ಲ. ವೈಯಕ್ತಿಕ ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ 50 ಸಾವಿರ, ದ.ಕ ಜಿಲ್ಲಾ ಉಸ್ತವಾರಿ ಸಚಿವ ಸುನಿಲ್ ಕುಮಾರ್ 25 ಸಾವಿರ ರೂಪಾಯಿ ಪುರುಷೋತ್ತಮ ಅವರ ಕುಟುಂಬಕ್ಕೆ ನೀಡಿದ್ದಾರೆ. ಇದು ಬಿಟ್ಟರೆ ಪುರುಷೋತ್ತಮ ಅವರ ಕುಟುಂಬಕ್ಕೆ ಬೇರೆ ಯಾವ ಪರಿಹಾರ ಈವರೆಗೆ ಸರಕಾರದಿಂದ ಸಿಕ್ಕಿರಲಿಲ್ಲ.
ಖಾಸಗಿ ಕಂಪನಿಯ ಉದ್ಯೋಗದಲ್ಲಿರುವ ಪುತ್ರಿಯ ಇಎಸ್ಐಯಿಂದಲೇ ಪುರುಷೋತ್ತಮ್ ಚಿಕಿತ್ಸೆ ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಆದ್ದರಿಂದ ತಕ್ಷಣ ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಅವರು ಪುರುಷೋತ್ತಮ್ ಅವರು ಚಿಕಿತ್ಸೆ ಪಡೆಯುತ್ತಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ಪತ್ರ ಬರೆದು ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸುವುದಾಗಿ ಹೇಳಿದ್ದಾರೆ. ಮತ್ತು ಈವರೆಗೆ ಇಎಸ್ಐನಿಂದ ನೀಡಲಾದ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಾರೀಕ್ಗೆ ನಾಳೆ ಶಸ್ತ್ರಚಿಕಿತ್ಸೆ