ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 22 ನೇ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ ಮತ್ತು ಉಪಮೇಯರ್ ಆಗಿ ಸುಮಂಗಳಾ ಆಯ್ಕೆಯಾಗಿದ್ದಾರೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಮೇಯರ್ ಮತ್ತು ಉಪಮೇಯರ್ಗಳನ್ನು ಆಯ್ಕೆ ಮಾಡಲಾಯಿತು. ಒಟ್ಟು 60 ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 44 ಬಿಜೆಪಿ, 12 ಕಾಂಗ್ರೆಸ್ , 2 ಇತರ ಸದಸ್ಯರಿದ್ದಾರೆ. ಚುನಾವಣೆಯಲ್ಲಿ ಇಬ್ಬರು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಭಾಗವಹಿಸಿದ್ದು, ಒಟ್ಟು 62 ಮಂದಿ ಮತ ಚಲಾಯಿಸಿದರು.
ಓದಿ : ಕೇರಳದ ಹೈವೇಯಲ್ಲಿ ದರೋಡೆ: ಆರೋಪಿಯೊಂದಿಗೆ ಕಡಬ ತಾಲೂಕಿಗೆ ಬಂದ ಕೇರಳ ಪೊಲೀಸರು
ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರೇಮಾನಂದ ಶೆಟ್ಟಿ ಅವರಿಗೆ 46 ಮತಗಳು ಬಂದರೆ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅನಿಲ್ ಕುಮಾರ್ ಅವರ ಪರ 14 ಮತಗಳು ಚಲಾವಣೆಯಾಗಿದ್ದವು, ಇಬ್ಬರು ಸದಸ್ಯರು ತಟಸ್ಥರಾಗಿದ್ದರು. ಚುನಾವಣೆಯಲ್ಲಿ ಅತ್ಯಧಿಕ ಮತ ಪಡೆದು ಪ್ರೇಮಾನಂದ ಶೆಟ್ಟಿ ನೂತನ ಮೇಯರ್ ಆಗಿ ಆಯ್ಕೆಯಾದರು.
ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಮಂಗಳಾ ರಾವ್ ಅವರು ಕಾಂಗ್ರೆಸ್ನಿಂದ ಜೆಸಿಂತಾ ವಿಜಯ್ ಆಲ್ಫ್ರೆಡ್ ಅವರ ವಿರುದ್ಧ ಅತ್ಯಧಿಕ ಮತ ಪಡೆದು ನೂತನ ಉಪಮೇಯರ್ ಆಗಿ ಆಯ್ಕೆಯಾದರು. ಇದೇ ಸಂದರ್ಭ ನೂತನ ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ನೂತನ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತೇನೆ ಭರವಸೆ ನೀಡಿದರು.