ಮಂಗಳೂರು: ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ ಇದೀಗ ಯಕ್ಷಗಾನದಲ್ಲೂ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸದ್ದು ಮಾಡುತ್ತಿದೆ. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಮೇಳದ ನೂತನ ಪ್ರಸಂಗದಲ್ಲಿ ಸ್ಫೋಟ ಪ್ರಕರಣವನ್ನು ತರಲಾಗಿದೆ. ಕುಕ್ಕರ್ ವಿಚಾರ ಹಾಸ್ಯ ರೂಪದಲ್ಲಿ ರಂಗಸ್ಥಳವೇರಿದೆ.
ಬಪ್ಪನಾಡು ಮೇಳದ ಮುಖ್ಯ ಹಾಸ್ಯಗಾರ ದಿನೇಶ್ ಕೋಡಪದವು ಅವರು ಕುಕ್ಕರ್ ಸಹಿತ ರಂಗಸ್ಥಳಕ್ಕೆ ಬಂದಿದ್ದಾರೆ. ತನಗೆ ಉಳಿದುಕೊಳ್ಳಲು ಎಲ್ಲೂ ಒಂದು ಕೊಠಡಿ ದೊರಕದಿರುವುದಕ್ಕೆ ಇದೇ ಕಾರಣವೆಂದು ಗೋಣಿಯಿಂದ ಕುಕ್ಕರ್ ಎತ್ತಿ ತೋರಿಸುತ್ತಾರೆ. ಕುಕ್ಕರ್ ನೋಡುತ್ತಲೇ ರಂಗಸ್ಥಳದಲ್ಲಿದ್ದ ಮತ್ತೊಬ್ಬ ಪಾತ್ರಧಾರಿ ಓಟಕ್ಕೀಳುತ್ತಾರೆ.
ಅವರು ರಂಗಸ್ಥಳದ ಹೊರಗಡೆಯಿಂದಲೇ ಅದನ್ನು ಎಸೆದುಬಿಡು ಸ್ಪೋಟ ಆಗುತ್ತದೆ ಎಂದು ಹೇಳುತ್ತಾರೆ. ಆಗ ಹಾಸ್ಯ ಪಾತ್ರಧಾರಿಯು 'ಇದನ್ನು ನಾನು ಅನ್ನ ಬೇಯಿಸಲು ತಂದಿರುವೆ' ಎಂದು ಹೇಳುತ್ತಾರೆ. 'ಮೊನ್ನೆ ಒಂದು ಕಡೆಯಲ್ಲಿ ಇದೇ ರೀತಿಯದ್ದೊಂದು ಸ್ಪೋಟ ಆಗಿದೆ' ಎಂದು ಪಾತ್ರಧಾರಿ ಹೇಳುತ್ತಾರೆ. ಈ ಮೂಲಕ ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ವಿಚಾರವನ್ನು ಹಾಸ್ಯದ ರೂಪದಲ್ಲಿ ಯಕ್ಷಗಾನದಲ್ಲಿ ತೆರೆದಿಡಲಾಗಿದೆ. ದಿನೇಶ್ ಕೋಡಪದವು ಅವರು ಪ್ರಸ್ತುತ ನಡೆಯುವ ವಿಚಾರಗಳನ್ನು ಹಾಸ್ಯ ರೂಪದಲ್ಲಿ ರಂಗಸ್ಥಳಕ್ಕೆ ತರುವಲ್ಲಿ ಸಿದ್ಧಹಸ್ತರು.
ಇದನ್ನೂ ಓದಿ: ಮಂಗಳೂರಲ್ಲಿ ಮೊದಲ ಬಾರಿಗೆ ಮಹಿಳಾ ಕಲಾವಿದರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ