ಮಂಗಳೂರು: ನೈರುತ್ಯ ರೈಲ್ವೆ ವಲಯವು ಹಾಸನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಮಂಗಳೂರು ಮತ್ತು ಬೆಂಗಳೂರು ಮಧ್ಯೆ ಡಿಸೆಂಬರ್ 14ರಿಂದ 22ರ ವರೆಗೆ ಕೆಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಮಾರ್ಗ ಮಧ್ಯೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಪಾಲಕ್ಕಾಡ್ ವಿಭಾಗದ ರೈಲು ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ. ರದ್ದಾದ ರೈಲುಗಳ ಪಟ್ಟಿ ಹಾಗೂ ಮಾಹಿತಿ ಇಲ್ಲಿದೆ.
ಸ್ಥಗಿತಗೊಳ್ಳಲಿರುವ ರೈಲುಗಳು: ಬೆಂಗಳೂರು-ಕಣ್ಣೂರು (ರೈಲು ಸಂಖ್ಯೆ 16511), ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16595) ಡಿಸೆಂಬರ್ 16ರಿಂದ 20ರ ವರೆಗೆ ರದ್ದುಪಡಿಸಲಾಗಿದೆ. ಕಣ್ಣೂರು - ಬೆಂಗಳೂರು (ರೈಲು ಸಂಖ್ಯೆ 16512), ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16596) ರೈಲುಗಳು ಡಿಸೆಂಬರ್ 17ರಿಂದ 21ರ ವರೆಗೆ ರದ್ದಾಗಲಿವೆ. ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ - ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಎಕ್ಸ್ಪ್ರೆಸ್ (16575) ರೈಲು ಕೂಡ ಡಿಸೆಂಬರ್ 14, 17, 19 ಮತ್ತು 20 ರಂದು ಸಂಚಾರ ನಡೆಸುವುದಿಲ್ಲ. ಮಂಗಳೂರು ಜಂಕ್ಷನ್-ಯಶವಂತಪುರ ಗೋಮಟೇಶ್ವರ ಎಕ್ಸ್ಪ್ರೆಸ್ (16576) ಡಿಸೆಂಬರ್ 15, 18, 20, 22ರಂದು ಸಂಚರಿಸುವುದಿಲ್ಲ.
ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ (16515) ವಾರಕ್ಕೆ ಮೂರು ದಿನ ಸಂಚರಿಸುವ ಈ ರೈಲು ಡಿ. 13, 15, 18, 20, 22 ರಂದು ಹಾಗೂ ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ (16516) ಡಿ. 14, 16, 19, 21, 23 ರಂದು ಸಂಚಾರ ನಡೆಸುವುದಿಲ್ಲ. ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ (16539/16540 ವಾರಕ್ಕೆ ಒಂದು ದಿನ ಸಂಚರಿಸುವ ರೈಲು) ಡಿ. 16 ಮತ್ತು 17ರಂದು ಸಂಚಾರ ನಡೆಸುವುದಿಲ್ಲ.
ಬೆಂಗಳೂರು-ಮುರುಡೇಶ್ವರ-ಬೆಂಗಳೂರು (16585/16586) ರೈಲು ಮಾತ್ರ ಬದಲಿ ಮಾರ್ಗದಲ್ಲಿ ಅಂದರೆ ಯಶವಂತಪುರ ಬೈಪಾಸ್, ನೆಲಮಂಗಲ, ಶ್ರವಣಬೆಳಗೊಳ, ಹಾಸನ ಮೂಲಕ ಸಂಚರಿಸಲಿದೆ. ಬೆಂಗಳೂರು ಸಿಟಿ, ಮಂಡ್ಯ ಹಾಗೂ ಮೈಸೂರು ನಿಲ್ದಾಣಗಳಿಗೆ ಡಿ.14ರಿಂದ 16ರ ವರೆಗೆ ತೆರಳುವುದಿಲ್ಲ. ಡಿ. 17 ಮತ್ತು 22ರ ವರೆಗೆ ಈ ರೈಲು ಯಶವಂತಪುರ ಬೈಪಾಸ್, ಹಾಸನ ಮೂಲಕ ಸಂಚರಿಸಲಿದ್ದು, ಮೈಸೂರನ್ನು ಸಂಪರ್ಕಿಸುವುದಿಲ್ಲ. ರದ್ದಾಗಿರುವ ರೈಲುಗಳ ಪಟ್ಟಿ ನೋಡಿಕೊಂಡು ಪ್ರಯಾಣಿಕರು ಪರ್ಯಾಯ ಸಾರಿಗೆ ಅನುಸರಿಸುವಂತೆ ರೈಲು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಮಂದಿಯ ಅಚ್ಚುಮೆಚ್ಚಿನ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ರದ್ದು