ಮಂಗಳೂರು: ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳದಿಂದ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದೂಡಿಕೆಯಾದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯನ್ನು ಆ.11ರಿಂದ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಮಂಗಳೂರು ವಿವಿಯ ಪದವಿ ಪರೀಕ್ಷೆಗೆ ಕೇರಳದಿಂದ ಬರುವ ವಿದ್ಯಾರ್ಥಿಗಳಿಂದ ಕೊರೊನಾ ಹಬ್ಬುವ ಸಾಧ್ಯತೆ ಹಿನ್ನೆಲೆಯಲ್ಲಿ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ, ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರೀಕ್ಷೆಯನ್ನು ಆ.11ರಿಂದ ನಡೆಸಲು ನಿರ್ಧರಿಸಲಾಗಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಿದ್ದಲ್ಲಿ ಪರೀಕ್ಷೆ ಬರೆಯಬಹುದು. ಹೊರ ರಾಜ್ಯದ ವಿದ್ಯಾರ್ಥಿ ಸೇರಿದಂತೆ ಯಾವುದೆ ವಿದ್ಯಾರ್ಥಿ ವಾಹನ ಸೌಲಭ್ಯ ಅಥವಾ ಕೋವಿಡ್ ಸಮಸ್ಯೆಯಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಓದಿ: 'ಸ್ಥಾನಮಾನ ಸಿಗದಿರುವುದು ನಿಮ್ಮೆಲ್ಲರಂತೆ ನನಗೂ ಬೇಸರ ತಂದಿದೆ': ನೋವು ಹಂಚಿಕೊಂಡ ಬೆಲ್ಲದ್..
ಜಿಲ್ಲೆಯಲ್ಲಿ 29,052 ಪದವಿ ಮತ್ತು 5,493 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಕೇರಳದ 2 ಸಾವಿರ ವಿದ್ಯಾರ್ಥಿಗಳು ಪದವಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.